ಪುತ್ತೂರು : ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಮತ್ತು ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕೇಂದ್ರ ಉಳ್ಳಾಲ ಸಹಿತ ನೂರಾರು ಮೊಹಲ್ಲಾಗಳ ಖಾಝಿಗಳಾಗಿ ಸೇವೆ ಸಲ್ಲಿಸಿದ ‘ಕೂರತ್ ತಂಬಳ್’ ಎಂದೇ ಪ್ರಸಿದ್ದರಾಗಿದ್ದ ಖುರ್ರತುಸ್ವಾದಾತ್ ಸಯ್ಯದ್ ಫಝಲ್ ಕೊಯಮ್ಮ ತಂಬಳ್ ಅಲ್ ಬುಖಾರಿಯವರ ಹೆಸರಿನಲ್ಲಿ ಉರೂಸ್ ಮುಬಾರಕ್ ಜೂ.26 ರಿಂದ 29 ರ ತನಕ ಪುತ್ತೂರು ಕೂರತ್ ಫಝಲ್ ನಗದಲ್ಲಿ ನಡೆಯಲಿದೆ ಎಂದು ಉರೂಸ್ ಸಮಿತಿ ಚೇರ್ ಮ್ಯಾನ್ ಕೆ.ಪಿ.ಸಿರಾಜುದ್ದೀನ್ ಕೆ.ಪಿ.ಕನ್ಯಾನ ತಿಳಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಂಬಳ್ ರವರ ಪ್ರಥಮ ವರ್ಷದ ಅನುಸ್ಮರಣಾ – ಊರೂಸ್ ಕಾರ್ಯಕ್ರಮ ಇದಾಗಿದ್ದು, ಕೇರಳ, ಕರ್ನಾಟಕದ ಸಾವಿರಾರು ಜನರು ಭಾಗವಹಿಸಲಿದ್ದಾರೆ. ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ವಿದ್ವಾಂಸರು, ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಜೂನ್ 26 ರ ಸಂಜೆ 4:30ಕ್ಕೆ ಉರೂಸ್ ಸಮಿತಿ ಚೇರ್ಮ್ಯಾನ್ ಖುದುವತುಸ್ಸಾದಾತ್ ಅಸ್ಸಯ್ಯದ್ ಕೆ.ಎಸ್ ಅಟ್ಟಕ್ಕೋಯ ತಂಬಳ್ ಕುಂಬೋಳ್ ರವರ ನೇತೃತ್ವದಲ್ಲಿ ಮಖಾಂ ಝಿಯಾರತ್ ನೊಂದಿಗೆ ಉರೂಸ್ ಸಮಾರಂಭಕ್ಕೆ ಚಾಲನೆ ದೊರಕಲಿದೆ. ಸಂಜೆ 5-30 ಕ್ಕೆ ನಡೆಯುವ ಉದ್ಘಾಟನಾ ಸಮಾರಂಭವನ್ನು ಕರ್ನಾಟಕ ಸುನ್ನೀ ಉಲಮಾ ಒಕ್ಕೂಟದ ರಾಜ್ಯಾಧ್ಯಕ್ಷ ಖಾಝಿ ಝನುಲ್ ಉಲಮಾ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಉದ್ಘಾಟಿಸಲಿದ್ದು, ಅಸ್ಸಯ್ಯದ್ ಅಬ್ದುರಹ್ಮಾನ್ ಸಾದಾತ್ ತಂಬಳ್ ಬಾಅಲವಿ ಉಲ್ಲೂರು ಅಧ್ಯಕ್ಷತೆ ವಹಿಸುವರು.
ಮರ್ಕಝ್ ನಾಲೆಡ್ಜ್ ಸಿಟಿ ಡೈರೆಕ್ಟರ್ ಡಾ ಎ.ಪಿ. ಅಬ್ದುಲ್ ಹಕೀಂ ಅಝಹರಿ ಮುಖ್ಯ ಭಾಷಣ ಮಾಡುವರು. ಜೂ.27 ಅಪರಾಹ್ನ 2 ಗಂಟೆಗೆ ಶಾಬ್ದುಲಿ ರಾತೀಬ್ ನಡೆಯಲಿದ್ದು, ಸಯ್ಯದ್ ಮುಹ್ಯಾರ್ ಮುಸ್ಅಬ್ ತಂಬಳ್ ಅಲ್ಬುಖಾರಿ ಕೂರತ್ ಪ್ರಾರ್ಥನೆಗೆ ನೇತೃತ್ವ ನೀಡುವರು. ಸಂಜೆ 4 ಗಂಟೆಗೆ ಬುರ್ದಾ ಮಜ್ಜಿಸ್ ನಡೆಯಲಿದೆ.

7 ಗಂಟೆಗೆ ಅಹ್ಲುಲ್ ಅಬಾಲ್ ಮೌಲಿದ್ ನಡೆಯಲಿದೆ. ಅಂದು ಸಂಜೆ 8 ಗಂಟೆಗೆ ನಡೆಯುವ ‘ನೂರೇ ಫಝಲ್’ ಕಾನ್ಸರೆನ್ಸ್ ಅನ್ನು ಇಂಡಿಯನ್ ಗ್ರಾಂಡ್ ಮುಫ್ಟಿ ಸುಲ್ತಾನುಲ್ ಉಲಮಾ ಎ.ಪಿ ಅಬೂಬಕರ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ.
ಜೂ. 28 ಶನಿವಾರ ಬೆಳಿಗ್ಗೆ 5-30 ಕ್ಕೆ ಮಂಕೂಸ್ ಮೌಲಿದ್, ಬೆಳಿಗ್ಗೆ 9 ಗಂಟೆಗೆ ತಾಜುಲ್ ಉಲಮಾ ಮೌಲಿದ್, ಬೆಳಿಗ್ಗೆ 10-30 ರಿಫಾಈ ರಾತೀಬ್ ಮಜ್ಜಿಸ್, ಅಪರಾಹ್ನ 2 ಗಂಟೆಗೆ ಮೊಹಲ್ಲಾ ಸಂಗಮ ನಡೆಯಲಿದೆ. ಸಂಜೆ 4-30 ನಡೆಯುವ ಸಾಮಾಜಿಕ ಕಾರ್ಯಕ್ರಮವನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದು, ಡಾ ಯು.ಟಿ. ಇಪ್ಲಿಕಾರ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ಬ್ರಿಜೇಶ್ ಚೌಟ,ಮಾಜಿ ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡ, ವಿಧಾನಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್ ಡಿಸೋಜಾ, ಮಾಜಿ ಸಚಿವರಾದ ರಮಾನಾಥ್ ರೈ, ಇಕ್ಸಾಲ್ ಅನ್ಸಾರಿ, ವಿನಯ್ ಕುಮಾರ್ ಸೊರಕೆ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸಂಜೆ 7 ಗಂಟೆಗೆ ನಡೆಯುವ ಉರೂಸ್ ಸಮಾರೋಪ ಸಮಾರಂಭವನ್ನು ರಈಸುಲ್ ಉಲಮಾ ಇ. ಸುಲೈಮಾನ್ ಉಸ್ತಾದ್ ಉದ್ಘಾಟಿಸಲಿದ್ದು ಹಲವಾರು ಧಾರ್ಮಿಕ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಜೂನ್ 29ರಂದು ಬೆಳಿಗ್ಗೆ 8:30 ಕ್ಕೆ ಖಮ್ಮುಲ್ ಖುರ್ಆನ್ ಸಮರ್ಪಣೆ ಹಾಗೂ ಬದ್ ಮೌಲಿದ್ ನಡೆಯಲಿದ್ದು, ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆ ತನಕ ನಡೆಯುವ ಮಹಾ ಅನ್ನದಾನದೊಂದಿಗೆ ಉರೂಸ್ ಕಾರ್ಯಕ್ರಮ ಸಮಾರೋಪಗೊಳ್ಳಲಿದೆ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಅಡ್ವಕೇಟ್ ಮುಹಮ್ಮದ್ ಶಾಕಿರ್ ಮಿತ್ತೂರು, ಕೆ.ವೈ ಹಂಝ ಮದನಿ ಗುರುವಾಯನಕೆರೆ, ಅಬೂಬಕರ್ ಕೂರತ್ , ಯೂಸುಫ್ ಸಾಜ ಉಪಸ್ಥಿತರಿದ್ದರು.
