ಉಡುಪಿ: ದೇವಸ್ಥಾನವೊಂದರ ಬೀಗ ಮುರಿದು ಕಳ್ಳತನಗೈಯಲು ಯತ್ನಿಸಿದ ಘಟನೆ ಜುಲೈ 25ರಂದು ಉಡುಪಿಯಲ್ಲಿ ನಡೆದಿದೆ.
ಇಲ್ಲಿನ ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಶುಕ್ರವಾರ ತಡರಾತ್ರಿ 3 ಗಂಟೆಯ ವೇಳೆಗೆ ದೇವಸ್ಥಾನದ ಹೆಬ್ಬಾಗಿಲಿನ ಬೀಗ ಮುರಿದು ಕಳ್ಳತನಗೈಯಲು ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ವೇಳೆ ಕಳ್ಳರ ಕೃತ್ಯ ಗಮನಿಸಿದ ದೇವಸ್ಥಾನದ ಕಾವಲುಗಾರ ಬೊಬ್ಬಿಟ್ಟಾಗ ಕಳ್ಳರು ಕಾವಲುಗಾರನಿಗೆ ಚಾಕು ತೋರಿಸಿ ಜೀವಬೆದರಿಕೆಯೊಡ್ಡಿ ಪಲಾಯನಗೈದಿದ್ದಾರೆ. ತಕ್ಷಣ ಆತ ಈ ವಿಚಾರವನ್ನು ಸ್ಥಳೀಯ ಭಕ್ತರಿಗೆ ತಿಳಿಸಿದ್ದು, ದೇವಸ್ಥಾನದ ವಠಾರದಲ್ಲಿ ಸ್ಥಳಿಯರು ಒಟ್ಟಾಗಿದ್ದಾರೆ.

ಕಳ್ಳರು ಓಡುತ್ತ ಸಾಗುವಾಗ ಒರ್ವ ಕಳ್ಳ ಮೂರ್ಛೆ ಬಂದು ಬಿದ್ದಿದ್ದಾನೆ. ಮೂರ್ಛೆ ಹೋಗಿರುವ ಕಳ್ಳನ ಉಪಚರಿಸುತ್ತಿದ್ದ ಮತ್ತೊಬ್ಬ ಕಳ್ಳನು ಓಡಲು ಪ್ರಯತ್ನಿಸಿದರೂ ಸಿಕ್ಕಿ ಬಿದ್ದಿದ್ದಾನೆ.
ಮೂರ್ಛೆ ವ್ಯಾಧಿ ಉಲ್ಭಣಿಸಿ ಗಂಭೀರ ಸ್ಥಿತಿಯಲ್ಲಿದ್ದ ಕಳ್ಳನಿಗೆ ಸ್ಥಳೀಯರು ಕಳ್ಳತನಕ್ಕೆ ತಂದಿರುವ ಕಬ್ಬಿಣದ ಸಲಕರಣೆಗಳನ್ನು ಕೈಗೆ ನೀಡಿ ಕಳ್ಳನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.

ಕರೆಯ ಮೆರೆಗೆ ಸ್ಥಳಕ್ಕೆ ಬಂದಿರುವ ಸಮಾಜಸೇವಕ ನಿತ್ಯಾನಂದ ಒಳಕಾಡುವರು ಸ್ಥಳೀಯರ ಸಹಕಾರದಿಂದ ಮೂರ್ಛೆ ಹೋಗಿರುವ ಕಳ್ಳನನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಮತ್ತೊಬ್ಬನನ್ನು ಕಳ್ಳನನ್ನು ಸ್ಥಳೀಯರು ಪೋಲಿಸರಿಗೆ ಒಪ್ಪಿಸಿದ್ದಾರೆ.
ಹೆಚ್ಚಿನ ವಿವರಗಳು ಮತ್ತಷ್ಟೇ ತಿಳಿದು ಬರಬೇಕಾಗಿದೆ.



