ವಿಟ್ಲ : ಕನ್ಯಾನ ಗ್ರಾಮದ ಮಂಡ್ಯೂರಿನಲ್ಲಿ ಜೂನ್ 15ರಂದು ಮಧ್ಯಾಹ್ನ ಭೂಮಿ ಕಂಪಿಸಿದೆ ಎಂಬ ವದಂತಿ ಆತಂಕ ಉಂಟುಮಾಡಿತ್ತು. ಆದರೆ ಸ್ಥಳಕ್ಕೆ ಧಾವಿಸಿದ ಕಂದಾಯ ಹಾಗೂ ಭೂ ವಿಜ್ಞಾನ ಅಧಿಕಾರಿಗಳು ನಡೆಸಿದ ಪರಿಶೀಲನೆ ಹಿನ್ನೆಲೆಯಲ್ಲಿ ಈ ಕಂಪನ ಹಳೇ ಕಟ್ಟಡದ ಗೋಡೆ ಕುಸಿದ ಶಬ್ದದಿಂದ ಉಂಟಾಗಿದೆಯೆಂದು ದೃಢಪಡಿಸಿದ್ದಾರೆ.
ಈ ಘಟನೆಯ ಬಗ್ಗೆ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಯಬಿಟ್ಟು ಭೀತಿಯ ವಾತಾವರಣ ಸೃಷ್ಟಿಯಾಗಿತ್ತು.

ಸ್ಥಳೀಯ ಗ್ರಾಮ ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿ, ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ದಕ್ಷಿಣ ಕನ್ನಡ ಜಿಲ್ಲಾ ಭೂ ವಿಜ್ಞಾನ ಅಧಿಕಾರಿಗಳು, ಬಂಟ್ವಾಳ ತಹಶೀಲ್ದಾರ್ ತಂಡ ಕನ್ಯಾನ ಭಾಗಕ್ಕೆ ಆಗಮಿಸಿ, ಸ್ಥಳದಲ್ಲಿ ಪರಿಶೀಲನೆ ನಡೆಸಿದಾಗ ಕರೋಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಮನೆಯೊಂದರ ಹಳೇ ಕಟ್ಟಡದ ಗೋಡೆ ಕುಸಿದಿರುವುದು ಬೆಳಕಿಗೆ ಬಂದಿದೆ. ಇದರ ಶಬ್ದದಿಂದಾಗಿ ಪರಿಸರದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವು ತಿಂಗಳ ಹಿಂದೆ ವಿಟ್ಲದಲ್ಲಿ ಭೂಮಿ ಕಂಪಿಸಿದ ಅನುಭವ ಉಂಟಾಗಿತ್ತು. ಪರಿಶೀಲಿಸಿದಾಗ ಮಾಡತ್ತಡ್ಕ ಎಂಬಲ್ಲಿರುವ ಕಲ್ಲಿನ ಕೋರೆಯಲ್ಲಿ ಸ್ಫೋಟಕ ದಾಸ್ತಾನು ಇರಿಸಿದ್ದ ಸ್ಥಳದಲ್ಲಿ ಸ್ಫೋಟ ಉಂಟಾಗಿ ಘಟನೆ ನಡೆದಿರುವುದು ಬೆಳಕಿಗೆ ಬಂದಿತ್ತು.
ಅದಲ್ಲದೇ ಕರೋಪಾಡಿ ಗ್ರಾಮದಲ್ಲಿ ಬಾಕ್ಸೈಟ್ ಮಣ್ಣು ಅಗೆಯುವ ಕೆಲಸಗಳು ನಡೆಯುತ್ತಿದ್ದು, ಇದರಿಂದ ಈ ರೀತಿಯ ಘಟನೆ ನಡೆದಿದೆ ಎಂಬುದಾಗಿ ವದಂತಿಗಳು ಹಬ್ಬಿತ್ತು. ಇದೀಗ ಈ ಎಲ್ಲಾ ವದಂತಿಗಳಿಗೆ ಕಂದಾಯ ಅಧಿಕಾರಿಗಳು ತೆರೆ ಎಳೆದಿದ್ದಾರೆ.

ಘಟನಾ ಸ್ಥಳಕ್ಕೆ ಭೂ ವಿಜ್ಞಾನ ಇಲಾಖೆಯ ದಾವೂದ್, ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್, ಕಂದಾಯ ನಿರೀಕ್ಷಕ ರವಿ ಎಂ. ಎನ್., ಗ್ರಾಮ ಆಡಳಿತಾಧಿಕಾರಿ ಅನಿಲ್ ಕುಮಾರ್, ಕನ್ಯಾನ ಗ್ರಾಮ ಪಂಚಾಯತ್ ಕಾರ್ಯದರ್ಶಿ ಅಬ್ದುಲ್ ಕರೀಮ್, ವಿಟ್ಲ ಠಾಣಾಧಿಕಾರಿ ರತನ್ ಕುಮಾರ್ ಇತರರು ಭೇಟಿ ನೀಡಿದ್ದರು.


