Breaking
24 Mar 2026, Tue

ಪೊಲೀಸರಿಂದ ಸಂಘಟನೆ ಗಳ ಮುಖಂಡರ ವಿರುದ್ಧ ಕಾನೂನು ಬಾಹಿರ ಕ್ರಮ ಆರೋಪ : ಕಾರಣ ಕೇಳಿ ಪೊಲೀಸ್ ಇಲಾಖೆಗೆ ನೋಟೀಸ್ ಜಾರಿ ಮಾಡಿದ “ಕರ್ನಾಟಕ ಪೊಲೀಸ್ ದೂರು ಪ್ರಾಧಿಕಾರ”:ಜೂನ್ 17ಕ್ಕೆ ವಿಚಾರಣೆ

ದಕ್ಷಿಣ ಕನ್ನಡ : ಜಿಲ್ಲೆಯ ವಿವಿಧ ಸಂಘಟನೆ ಗಳ ಮುಖಂಡರ ವಿರುದ್ಧ ಕಾನೂನು ಬಾಹಿರ ಕ್ರಮ ಕೈಗೊಂಡ ಆರೋಪದ ಹಿನ್ನಲೆ , ಪೊಲೀಸ್ ಕ್ರಮದ ವಿರುದ್ಧ “ಕರ್ನಾಟಕ ಪೊಲೀಸ್ ದೂರು ಪ್ರಾಧಿಕಾರ” ಪ್ರಕರಣ ದಾಖಲಿಸಿ ಕಾರಣ ಕೇಳಿ ಪೊಲೀಸ್ ಇಲಾಖೆಗೆ ನೋಟೀಸ್ ಜಾರಿಮಾಡಿದೆ.

ಕೆಲ ದಿನಗಳ ಹಿಂದೆ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಳ್ತಮಜಲಿನಲ್ಲಿ ಅಬ್ದುಲ್ ರೆಹಮಾನ್ ಎಂಬ ಯುವಕ ಭೀಕರವಾಗಿ ಹತ್ಯೆಯಾಗಿದ್ದ. ಕೆಲ ತಿಂಗಳ ಹಿಂದೆ ಮಂಗಳೂರಿನ ಬಜ್ಪೆಯಲ್ಲಿ ಸುಹಾಸ್ ಶೆಟ್ಟಿ ಎಂಬ ಹಿಂದೂ ಕಾರ್ಯಕರ್ತನನ್ನ ಭೀಕರವಾಗಿ ಹತ್ಯೆ ಮಾಡಲಾಗಿತ್ತು ಈ ಸಂಧರ್ಭದಲ್ಲಿ ಕರಾವಳಿ ಕೆಂಡ ಮುಚ್ಚಿದ ಬೂದಿಯಂತೆ ಆಗಿತ್ತು, ಅಲ್ಲಲ್ಲಿ ಪ್ರತೀಕಾರದ ಮಾತುಗಳು ಕೇಳಿಬಂದಿದ್ದವು.

ಅದರ ಬೆನ್ನಲ್ಲೇ ಬಂಟ್ವಾಳದ ಕೊಳ್ತಮಜಲಿನಲ್ಲಿ ಅಬ್ದುಲ್ ರೆಹಮಾನ್ ಎಂಬ ಯುವಕನ ಹತ್ಯೆ ನಡೆದಿತ್ತು, ಇದು ಎರಡು ಸಮುದಾಯವನ್ನು ಕೇರಳಿಸಿತ್ತು, ಇದರ ಬೆನ್ನಲ್ಲೇ ಜಿಲ್ಲೆಯ ಪೊಲೀಸ್ ವರಿಷ್ಟಾಧಿಕಾರಿ ಹಾಗೂ ಕಮಿಷನರ್ ಬದಲಾವಣೆಯಾಗಿತ್ತು.

ನೂತನವಾಗಿ ಅಧಿಕಾರ ಸ್ವೀಕರಿಸಿದ ಪೊಲೀಸ್ ವರಿಷ್ಟಾಧಿಕಾರಿ ಹಾಗೂ ಕಮಿಷನರ್ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಲವು ಕಾನೂನು ಕ್ರಮಗಳನ್ನು ಕೈಗೊಂಡಿದ್ದರು, ಅದರ ಭಾಗವಾಗಿ ಅನೇಕ ಹಿಂದೂ-ಮುಸ್ಲಿಂ ಸಂಘಟನೆಗಳ ಮುಖಂಡರ ಗಡಿಪಾರಿಗೆ ಪ್ರಕ್ರಿಯೆ ಆರಂಭಿಸಿದ್ದರು ಅಲ್ಲದೆ ನಡುರಾತ್ರಿ ಮುಖಂಡರ ಮನೆಗಳಿಗೆ ತೆರಳಿ ಅವರ ಫೋಟೋ ತೆಗೆದು ಜಿಪಿಎಸ್ ಮಾಡುವ ಕೆಲಸವನ್ನು ಪೊಲೀಸರು ಮಾಡಿದ್ದರು, ಇದಕ್ಕೆ ಸಂಘಟನೆ, ಬಿಜೆಪಿ ಯ ನಾಯಕರು ತೀವ್ರವಾಗಿ ವಿರೋಧಿಸಿದ್ದರು.

ಈ ನಡುವೆ, ಪೊಲೀಸರ ಈ ಕ್ರಮ ಕಾನೂನು ಬಾಹಿರ ಎಂದು ಆರೋಪಿಸಿ ಖ್ಯಾತ ನ್ಯಾಯವಾದಿಗಳಾದ ಗಿರೀಶ್ ಭಾರಧ್ವಜ್ ಹಾಗೂ ಅರುಣ್ ಶ್ಯಾಮ್ ಕರ್ನಾಟಕ ಪೊಲೀಸ್ ದೂರು ಪ್ರಾಧಿಕಾರ ಹಾಗೂ ಮಾನವ ಹಕ್ಕುಗಳ ಆಯೋಗಕ್ಕೆ,ಈ ಕುರಿತು ಇಲಾಖೆಗೆ ಸರಿಯಾದ ನಿರ್ದೇಶನ ನೀಡುವಂತೆ ಕೋರಿ ಪತ್ರ ಬರೆದಿದ್ದರು, ಇದೀಗ ಇವರುಗಳ ಮನವಿಗೆ ಸ್ಪಂದಿಸಿರುವ ಎರಡು ಆಯೋಗಗಳು ಪ್ರಕರಣ ದಾಖಲಿಸಿ ಈ ಕುರಿತು ಪೊಲೀಸ್ ಇಲಾಖೆಯ ಕ್ರಮದ ಬಗ್ಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದು, ಜೂನ್ 17ರಂದು ಈ ಅರ್ಜಿಯ ವಿಚಾರಣೆ ನಡೆಸಲಿದೆ.

ಈ ಕುರಿತು ನ್ಯಾಯವಾದಿ ಅರುಣ್ ಶ್ಯಾಮ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *