ಬಂಟ್ವಾಳ: ಪಾಣೆಮಂಗಳೂರು ಹಳೆ ಸೇತುವೆಯ ಬಳಿ ಜೂನ್ 5 ರಂದು ಬೈಕ್, ಮೊಬೈಲ್, ಚಪ್ಪಲಿ ಹಾಗೂ ಅಂಗಿ ಬಿಟ್ಟು ನಾಪತ್ತೆಯಾಗಿದ್ದ ಪುತ್ತೂರು ನಗರಸಭಾ ಸದಸ್ಯ ರಮೇಶ್ ರೈ ಅವರ ಮೃತದೇಹ ಪತ್ತೆಯಾಗಿದೆ.

ಮೃತರು ಸುಳ್ಯ ಮಂಗಳ ಡ್ರೈವಿಂಗ್ ಸ್ಕೂಲ್ ನ ಮಾಲಕರಾಗಿದ್ದಾರೆ ಎಂದು ತಿಳಿದುಬಂದಿದೆ.

ಜೂನ್ 5ರಂದು ಬೆಳಿಗ್ಗೆ ಸುಮಾರು 11 ಗಂಟೆಗೆ ಪಾಣೆಮಂಗಳೂರು ಹಳೆ ಸೇತುವೆಯ ಕೆಳಭಾಗದಲ್ಲಿ ಬೈಕ್ ಅಂಗಿ ಮೊಬೈಲ್ ಮತ್ತು ಚಪ್ಪಲ್ಲಿ ಅನಾಥವಾಗಿ ಬಿದ್ದಿರುವುದನ್ನು ಗಮನಿಸಿ, ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು.

ತಕ್ಷಣವೇ ಪೊಲೀಸ್ ಹಾಗೂ ಅಗ್ನಿಶಾಮಕ ದಳದವರು ಸ್ಥಳೀಯರ ಹಾಗೂ ಈಜುಪಟುಗಳ ನೆರವಿನಿಂದ ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ.

ರಮೇಶ್ ರೈ ಅವರು ಇತ್ತೀಚೆಗೆ ನಡೆದ ಪುತ್ತೂರು ನಗರಸಭೆಯ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿಯಾಗಿ ನೆಲ್ಲಿಕಟ್ಟೆ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದರು.

ಅವರು ಸಜ್ಜನ ರಾಜಕಾರಣಿ ಎಂದೇ ಚಿರಪರಿಚಿತರಾಗಿದ್ದರು. ಅವರ ಮಿತ್ರರು ಈ ಘಟನೆಯಿಂದ ಆಘಾತಕ್ಕೆ ಒಳಗಾಗಿದ್ದಾರೆ. ಆರೋಗ್ಯ ಸಮಸ್ಯೆ ಅಥವಾ ಹಣಕಾಸಿನ ಸಮಸ್ಯೆಯಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಹೇಳಲಾಗುತ್ತಿದೆ.

ಪಾಣೆಮಂಗಳೂರು ಸೇತುವೆ ಬಳಿ ದೊರೆತ ಮೊಬೈಲ್ ನಂಬರ್ ರನ್ನು ಪಡೆದು ಪೊಲೀಸರು ಕರೆ ಮಾಡಿದಾಗ, ಅದು ಪುತ್ತೂರಿನ ರಮೇಶ್ ರೈ ಅವರಿಗೆ ಸೇರಿದ್ದೆಂದು ತಿಳಿದುಬಂದಿತ್ತು. ಕೂಡಲೇ ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಯಿತು. ಇದೀಗ ಕುಟುಂಬ ಸದಸ್ಯರು ಮೃತದೇಹವನ್ನು ಗುರುತಿಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.
ಮೃತರು ಪತ್ನಿ ಮೋಹಿನಿ, ಪುತ್ರ ವಿನೀಶ್, ಪುತ್ರಿ ವೀಕ್ಷಾ ಹಾಗೂ ಅಪಾರ ಕುಟುಂಬ ವರ್ಗ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.


