ಬಂಟ್ವಾಳ: ಪುರಸಭಾ ವ್ಯಾಪ್ತಿಯ ಬಂಟ್ವಾಳ – ಮೂಡಬಿದಿರೆ ರಸ್ತೆಯಲ್ಲಿ ಲೊರೆಟ್ಟೊ ಕಮಲ್ ಕಟ್ಟೆ ಎಂಬಲ್ಲಿ ಬೃಹತ್ ಗಾತ್ರದ ಬಂಡೆ ಕಲ್ಲು ರಸ್ತೆಗೆ ಬಿದ್ದು ಎರಡು ದಿನಗಳಾದರೂ ತೆರವು ಕಾರ್ಯ ಮಾಡದ ಅಧಿಕಾರಿಗಳ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಇಲ್ಲಿನ ಕಮಲ್ ಕಟ್ಟೆ ಎಂಬಲ್ಲಿ ಗುಡ್ಡವನ್ನು ಅಗೆದು ಮಣ್ಣು ತೆಗೆಯಲಾಗಿದೆ. ಈ ವೇಳೆ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಗುಡ್ಡದ ಮೇಲಿದ್ದ ಎರಡು ಬಂಡೆ ಕಲ್ಲುಗಳು ರಸ್ತೆಗೆ ಉರುಳಿ ಬಿದ್ದಿದೆ. ಇದರ ಜೊತೆಗೆ ಜಾಹಿರಾತು ಫಲಕದ ಕಂಬವೊ0ದು ರಸ್ತೆಗೆ ಬಿದ್ದಿದೆ.

ಕಲ್ಲುಬಂಡೆ ಹಾಗೂ ಜಾಹೀರಾತು ಫಲಕದ ಕಂಬ ಎರಡು ಕೂಡ ರಸ್ತೆಯ ಮೇಲೆ ಬಿದ್ದು ಅಪಾಯಕ್ಕೆ ಆಹ್ವಾನವನ್ನು ನೀಡುತ್ತಿದೆ. ಈ ರಸ್ತೆಯಲ್ಲಿ ಅತೀ ಹೆಚ್ಚು ವಾಹನಗಳು ಸಂಚಾರ ಮಾಡುತ್ತಿದ್ದು ಸವಾರರಿಗೆ ಜೀವಕ್ಕೆ ಕಂಟಕವಾಗಿ ಪರಿಣಮಿಸುವ ಸಾಧ್ಯತೆಗಳು ಹೆಚ್ಚಾಗಿವೆ.

ಹಾಗಾಗಿ ಕಳೆದ ಎರಡು ದಿನಗಳಿಂದ ಬಂಡೆ ಕಲ್ಲುಗಳನ್ನು ರಸ್ತೆಯಿಂದ ತೆರವುಗೊಳಿಸಲು ನಿರ್ಲಕ್ಷ್ಯವಹಿಸಿರುವ ಅಧಿಕಾರಿಗಳ ವಿರುದ್ಧ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದು, ಸಮಸ್ಯೆಗೆ ಶೀಘ್ರ ಮುಕ್ತಿ ನೀಡುವಂತೆ ಮನವಿ ಮಾಡಿದ್ದಾರೆ.



