ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಹಲವು ಮನೆಗಳಿಗೆ ಹಾನಿಯಾಗಿದೆ.
ಮಂಗಳೂರಿನ ದೇರೆಬೈಲು ಗ್ರಾಮದ ಮಾಲೆಮಾರ್ ಎಂಬಲ್ಲಿ ವೇದಾವತಿ ಎಂಬವರ ಮನೆಗೆ ಆವರಣ ಗೋಡೆ ಕುಸಿದು ಭಾಗಶಃ ಹಾನಿಯಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮೂಲಗಳು ತಿಳಿಸಿವೆ.
ಮಂಗಳೂರು ತೋಟ ಗ್ರಾಮದ ಎಮ್ಮೆಕೆರೆ ಎಂಬಲ್ಲಿ ಸಂಪ ಶೆಟ್ಟಿ ಎಂಬವರ ಮತ್ತು ಬಂಟ್ವಾಳದ ಮೇರಮಜಲು ಎಂಬಲ್ಲಿ ಬರೆ ಜರಿದು ಚಂದ್ರಾವತಿ ಎಂಬವರ ಮನೆಗೆ ಹಾನಿಯಾಗಿದೆ.

ರಾಷ್ಟ್ರೀಯ ಹೆದ್ದಾರಿ 169ರ ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಡೂರು ಗ್ರಾಮದ ನೂಯಿ ಎಂಬಲ್ಲಿ ಮನೆ ಅಂಗಳಕ್ಕೆ, ಗದ್ದೆಗೆ ಭಾರೀ ಪ್ರಮಾಣ ಮಣ್ಣು ತುಂಬಿದೆ.

ಗುರುಪುರದಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ನೂತನ ಸೇತುವೆಯಿಂದ ಮುಂದಕ್ಕೆ ಗದ್ದೆಗಳಿಗೆ ಸುಮಾರು 20 ಅಡಿ ಎತ್ತರಕ್ಕೆ ಮಣ್ಣು ಹಾಕಿ ರಸ್ತೆ ನಿರ್ಮಿಸಲಾಗಿತ್ತು. ಆದರೆ ಭಾರೀ ಮಳೆಗೆ ಮಣ್ಣೆಲ್ಲ ಗದ್ದೆ ಪ್ರದೇಶದತ್ತ ಜರಿಯಲಾರಂಭಿಸಿ ಸಮೀಪದ ಮನೆಯವರಿಗೆ ಕೃತಕ ದಿಗ್ಭಂದನ ಉಂಟಾಗಿದೆ.




