ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಸವಣಾಲು ಗ್ರಾಮದ ಹಿತ್ತಿಲಪೇಲ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಅಪಾಯಕಾರಿ ನದಿಗೆ ಶಾಶ್ವತ ಸೇತುವೆ ನಿರ್ಮಾಣ ಸಂಬಂಧಿಸಿದಂತೆ ಸೂಕ್ತ ವರದಿ ಸಲ್ಲಿಸುವಂತೆ ಬೆಳ್ತಂಗಡಿ ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಮನು ಬಿ.ಕೆ. ಅವರು ಮೇಲಂತಬೆಟ್ಟು ಗ್ರಾಮ ಪಂಚಾಯತ್ಗೆ ಮೌಖಿಕ ನಿರ್ದೇಶನ ನೀಡಿದ್ದಾರೆ.

ಲಾಯಿಲ ಗ್ರಾಮದ ಬರಮೇಲು ನಡುಗುಡ್ಡೆ ಮರದ ಕಾಲುಸಂಕ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ತಾಲೂಕು ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಪ್ರಧಾನ ಸಿವಿಲ್ ನ್ಯಾಯಾಧೀಶ ರಾಮಲಿಂಗಪ್ಪ ಅವರೊಂದಿಗೆ ಸಾರ್ವಜನಿಕರು ಮತ್ತು ಅಧಿಕಾರಿಗಳಿಂದ ತಾಲೂಕಿನಲ್ಲಿ ಅಪಾಯಕಾರಿ ನದಿ ಹಾಗೂ ತೊರೆಗಳಿಗೆ ಸೇತುವೆಗಳ ಕೊರತೆಯ ಬಗ್ಗೆ ಮಾಹಿತಿ ಸಂಗ್ರಹಿಸಲಾಯಿತು.

ಈ ವೇಳೆ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಸಂಚಾಲಕ ಶೇಖರ್ ಲಾಯಿಲ ಮಾತನಾಡಿ, ಸವಣಾಲು ಗ್ರಾಮದ ಹಿತ್ತಿಲಪೇಲ ಪ್ರದೇಶದಲ್ಲಿ ಸೇತುವೆ ಇಲ್ಲದ ಕಾರಣ ಕಳೆದ ವರ್ಷ ಇಬ್ಬರು ಯುವಕರು ದ್ವಿಚಕ್ರ ವಾಹನ ಸಮೇತ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿರುವುದನ್ನು ವಿವರಿಸಿದರು. ಇದುವರೆಗೂ ಶಾಶ್ವತ ಸೇತುವೆ ನಿರ್ಮಾಣವಾಗಿಲ್ಲ ಎಂದು ಅವರು ಗಮನ ಸೆಳೆದರು.

ಅಲ್ಲದೆ, ರಸ್ತೆ ಮತ್ತು ವಿದ್ಯುತ್ ಸಂಪರ್ಕದಿಂದ ವಂಚಿತರಾಗಿರುವ ಮಲೆಕುಡಿಯ ಸಮುದಾಯದ ಒಂಬತ್ತು ಕುಟುಂಬಗಳು ಈ ಪ್ರದೇಶದಲ್ಲಿ ವಾಸಿಸುತ್ತಿದ್ದು, ಈ ವರ್ಷ ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಅಪಾಯಕಾರಿ ನದಿಯನ್ನು ದಾಟುವುದನ್ನು ನಿಷೇಧಿಸಿ ಬ್ಯಾನರ್ ಅಳವಡಿಸಿರುವುದರಿಂದ ಅವರು ಸರ್ಕಾರಿ ದಿಗ್ಬಂಧನಕ್ಕೆ ಒಳಗಾಗಿದ್ದಾರೆ ಎಂದು ಶೇಖರ್ ಲಾಯಿಲ ನ್ಯಾಯಾಧೀಶರ ಗಮನಕ್ಕೆ ತಂದರು.

ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿದ್ದ ಉಪ ತಹಶೀಲ್ದಾರ್ ಮಲ್ಲಪ್ಪ ನಡುಗುಡ್ಡಿಯವರಿಗೆ, ಮೇಲಂತಬೆಟ್ಟು ಗ್ರಾಮ ಪಂಚಾಯತ್ ಹಾಗೂ ಗ್ರಾಮ ಆಡಳಿತಾಧಿಕಾರಿಯಿಂದ ಈ ಕುರಿತು ಸಮಗ್ರ ವರದಿ ಪಡೆದು ಸೋಮವಾರ ಮಧ್ಯಾಹ್ನದೊಳಗೆ ಸಲ್ಲಿಸುವಂತೆ ನ್ಯಾಯಾಧೀಶರು ಸೂಚನೆ ನೀಡಿದರು.


