ಬೆಂಗಳೂರು: ಆಪರೇಷನ್ ಸಿಂಧೂರ್ ಬಗ್ಗೆ ನಾಲಿಗೆ ಹರಿಬಿಟ್ಟಿರುವ ಶಾಸಕ ಕೊತ್ತೂರು ಮಂಜುನಾಥ್ರನ್ನು ಕಾಂಗ್ರೆಸ್ ನಿಂದ ವಜಾ ಮಾಡಿ ಎಂದು ವಿಧಾನ ಪರಿಷತ್ ಸದಸ್ಯ, ಜೆಡಿಎಸ್ ನಾಯಕ ಟಿ.ಎ.ಶರವಣ ಆಗ್ರಹಿಸಿದ್ದಾರೆ.
ದೇಶದ ಸ್ವಾಭಿಮಾನ, ಘನತೆ ಮತ್ತು ಸಾರ್ವಭೌಮತೆಯ ಸಂಕೇತವಾದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಬಗ್ಗೆ ಸ್ವಲ್ಪವೂ ಗೌರವ ಇಲ್ಲದೆ ಶಾಸಕ ಕೊತ್ತೂರು ಮಂಜುನಾಥ್ ಅವರು ಬೇಕಾಬಿಟ್ಟಿ ನಾಲಿಗೆ ಹರಿಬಿಟ್ಟಿದ್ದಾರೆ.

ಸೈನಿಕರನ್ನು ಹೊತ್ತ ನಾಲ್ಕು ವಿಮಾನ ಹೋಗಿ ಬಾಂಬ್ ಹಾಕಿ ಬಂದರೆ ಪಾಕಿಸ್ತಾನಕ್ಕೆ ತಕ್ಕ ಪಾಠ ಹೇಗಾಗುತ್ತೆ? ಎಂದು ಕೇಳಿರುವ ಮಂಜುನಾಥ್ ನಿಲುವನ್ನು ಕಾಂಗ್ರೆಸ್ ಪಕ್ಷ ಸಮರ್ಥಿಸುತ್ತದೆಯೇ? ಇದು ಕಾಂಗ್ರೆಸ್ ಪಕ್ಷದ ನಿಲುವಾಗಿದೆಯೇ..?
ಉಗ್ರರ ಪೈಶಾಚಿಕ ಕೃತ್ಯದಿಂದ ತಮ್ಮ ಪತಿ, ಅಪ್ಪ, ಇಲ್ಲವೇ ಸಹೋದರರನ್ನು ಕಳೆದುಕೊಂಡ ಕುಟುಂಬಗಳ ನೋವು ಈ ಶಾಸಕರಿಗೆ ಗೊತ್ತಾ? ಅಮೂಲ್ಯ ಜೀವಗಳನ್ನು ಈ ಶಾಸಕ ತಂದುಕೊಡುತ್ತಾರಾ? ಕಾಂಗ್ರೆಸ್ ಪಕ್ಷ ಈ ಬಗ್ಗೆ ಏನು ಹೇಳುತ್ತೆ?.

ಕರಾವಳಿಯಲ್ಲಿ ನಡೆಯುತ್ತಿರುವ ಹಿಂಸಾಚಾರ, ಸರಣಿ ಕೊಲೆಗಳನ್ನು ನೋಡಿದರೆ ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನೋಡಿಕೊಳ್ಳುವ ತಾಕತ್ತು ಈ ಸರಕಾರಕ್ಕೆ ಇಲ್ಲ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತೆ. ಇಲ್ಲೇ ಗುಪ್ತಚರ ಇಲಾಖೆ ವಿಫಲವಾಗಿದೆ. ಅಂಥದ್ದರಲ್ಲಿ ಈ ಕಾಂಗ್ರೆಸ್ ಶಾಸಕರು ಸೇನೆಯ ಬಗ್ಗೆ ಮಾತಾಡಲು ಯಾವ ನೈತಿಕತೆ ಇದೆ? ಎಂದು ಕಿಡಿಕಾರಿದ್ದಾರೆ.
ಸೈನಿಕರಿಗೆ ಅಪಮಾನ ಮಾಡಿರುವ, ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಗೇಲಿ ಮಾಡಿರುವ ಶಾಸಕ ಮಂಜುನಾಥ್ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.


