ಮಂಗಳೂರು: ನಗರದ ಪಡೀಲಿನಲ್ಲಿ ನಿರ್ಮಿಸಲಾಗಿರುವ ನೂತನ ಜಿಲ್ಲಾಧಿಕಾರಿ ಕಚೇರಿ ಉದ್ಘಾಟನೆ ಸಮಾರಂಭದ ವೇಳೆ ಜಿಲ್ಲಾಧಿಕಾರಿ ಕಚೇರಿಯ ವಿಚಾರದಲ್ಲಿ ಶಾಸಕ ವೇದವ್ಯಾಸ ಕಾಮತ್ ಮತ್ತು ಸಿಎಂ ಸಿದ್ದರಾಮಯ್ಯ ಅವರ ನಡುವೆ ಕ್ರೆಡಿಟ್ ವಾರ್ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಈ ಕಾರ್ಯಕ್ರಮದಲ್ಲಿ ಶಾಸಕ ಕಾಮತ್ ಅವರು ತಮ್ಮ ಭಾಷಣದ ವೇಳೆ ಜಿಲ್ಲಾಧಿಕಾರಿ ಕಚೇರಿಯನ್ನು ಸ್ಮಾರ್ಟ್ ಸಿಟಿ ದುಡ್ಡಿನಲ್ಲಿ ಪೂರ್ತಿ ಮಾಡಲಾಗಿದೆ. ಸ್ಮಾರ್ಟ್ ಸಿಟಿ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆ. ಮೋದಿ ಇಂಥ ಯೋಜನೆ ಮಾಡದೇ ಇರುತ್ತಿದ್ದರೆ ಜಿಲ್ಲಾಧಿಕಾರಿ ಕಚೇರಿಯೇ ಆಗುತ್ತಿರಲಿಲ್ಲ.

ಸ್ಮಾರ್ಟ್ ಸಿಟಿ ಯೋಜನೆ ಕೇಂದ್ರ- ರಾಜ್ಯ ಸರ್ಕಾರದ ಪಾಲಿದ್ದರೂ ಇಂಥ ಯೋಜನೆ ಮಾಡಿದ್ದು ಮೋದಿ. ಇದರ 25 ಕೋಟಿ ನೆರವಿನಲ್ಲಿ ಕಾಮಗಾರಿ ಪೂರ್ತಿಗೊಳಿಸಲಾಗಿದೆ. ಹಾಗಾಗಿ, ಕೇಂದ್ರಕ್ಕೂ ಇದರ ಕ್ರೆಡಿಟ್ ಸಲ್ಲುತ್ತದೆ. ಕೇವಲ ರಾಜ್ಯ ಸರ್ಕಾರದ ಹಣದಿಂದಷ್ಟೇ ಆಗಿದ್ದಲ್ಲ ಎಂದರು.

ಈ ವೇಳೆ ಶಾಸಕ ಕಾಮತ್ ಮಾತಿಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ ಅವರು ಎಯ್ ಕಾಮತ್, ಸ್ಮಾರ್ಟ್ ಸಿಟಿ ದುಡ್ಡು ಅಂದ್ರೆ ಏನ್ರಿ. ಅದರಲ್ಲಿ ಅರ್ಧ ಪಾಲು ರಾಜ್ಯದ್ದೂ ಇದೆ. ಸ್ಮಾರ್ಟ್ ಸಿಟಿಯಿಂದ ಮಾಡಿದ್ದು ಅನ್ನೋದಾದ್ರೆ ಅದಕ್ಕೂ ಹಿಂದೆ ನಾಲ್ಕು ವರ್ಷ ನಿಮ್ಮೆ ಸರ್ಕಾರ ಇತ್ತಲ್ವಾ.
ಯಾಕೆ ನೀವು ಮಾಡಿಲ್ಲ ಎಂದು ಗುದ್ದು ನೀಡಿದರು. ರಾಜಕೀಯ ಮಾಡೋಣ, ಹಾಗಂತ ವಿಷಯ ಇರೋದನ್ನು ತಿರುಚಲು ಹೋಗಬಾರದು. ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಬೇಡ ಎಂದು ಸಲಹೆ ನೀಡಿದರು.


