ಬೆಳ್ತಂಗಡಿ : ಪಾಕ್ ಉಗ್ರ ಕ್ರಿಮಿಗಳ ವಿರುದ್ಧ ಭಾರತೀಯ ಸೇನೆ ಸಾರಿದ ಆಪರೇಷನ್ ಸಿಂಧೂರ್ ಬಗ್ಗೆ ಎಲ್ಲೆಡೆ ಹರ್ಷ ವ್ಯಕ್ತವಾಗುತ್ತಿದೆ.
ಈ ನಡುವೆ ಬೆಳ್ತಂಗಡಿಯ ಬೆಳಾಲಿನ, ಕಾಲೇಜು ವಿದ್ಯಾರ್ಥಿನಿ ರೇಷ್ಮಾ ಪೋಸ್ಟ್ ಬಗ್ಗೆ ವ್ಯಾಪಕ ಚರ್ಚೆಗಳು ಶುರುವಾಗಿದ್ದು ಪ್ರಕರಣ ದಾಖಲಿಸಲು ಒತ್ತಾಯ ಕೇಳಿ ಬರುತ್ತಿದೆ.ಇನ್ನೊಂದು ಕಡೆ ವಿದ್ಯಾರ್ಥಿನಿಯ ಈ ಪೋಸ್ಟ್ಗೆ ಎಬಿವಿಪಿ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು ಮಂಗಳೂರು ವಿವಿಯ ಕನ್ನಡ ವಿಭಾಗದ ವಿದ್ಯಾರ್ಥಿನಿ ರೇಷ್ಮಾಳನ್ನು ಅಮಾನುತುಗೊಳಿಸುವಂತೆ ಮಂಗಳೂರು ವಿವಿಗೆ ಒತ್ತಾಯ ಮಾಡಿದ್ದು ಮನವಿ ಕೂಡ ಸಲ್ಲಿಸಿದೆ.

ಇಂತಹ ದೇಶದ್ರೋಹದ ಮನಸ್ಥಿತಿಯನ್ನು ಪ್ರಾರಂಭಿಕ ಹಂತದಲ್ಲೇ ಹೊಸುಕಿ ಹಾಕುವಂತೆ ಎಬಿವಿಪಿ ಒತ್ತಾಯಿಸಿದೆ.ಇನ್ನು ವಿದ್ಯಾರ್ಥಿನಿ ರೇಷ್ಮಾ ಅವರು ಇನ್ಸ್ಟಾಗ್ರಾಂನಲ್ಲಿ ಹಾಕಿದ ಆಪರೇಷನ್ ಸಿಂಧೂರ್ ಕುರಿತ ಪೋಸ್ಟ್ ಬಹಳಷ್ಟು ವೈರಲ್ ಆಗುತ್ತಿದೆ.

ಪೋಸ್ಟ್ನಲ್ಲಿ ಬಳಸಿದ ಭಾಷೆ ಮತ್ತು ಹ್ಯಾಶ್ಟ್ಯಾಗ್ಗಳು ವಿವಾದಕ್ಕೆ ಕಾರಣವಾಗಿವೆ. ಅಪರೇಷನ್ ಸಿಂದೂರ್ ಗೆ ಧಿಕ್ಕಾರ ಎಂಬ ಹ್ಯಾಶ್ ಟ್ಯಾಗ್ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪೋಸ್ಟ್ ಗೆ ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ರೇಷ್ಮಾ ತಮ್ಮ ಪೋಸ್ಟ್ ಡಿಲೀಟ್ ಮಾಡಿದ್ದಾರೆ.

ಬಳಿಕ ಪೋಸ್ಟ್ ವೈರಲ್ ಆದ ಬೆನ್ನಲ್ಲೇ ತನ್ನನ್ನು ತಾನು ಸಮರ್ಥಿಸಿಕೊಂಡಿರುವ ರೇಷ್ಮಾ ಭಾರತ ದೇಶದ ಮೇಲೆ ಅಪಾರ ಪ್ರೀತಿ ಇದೆ, ಗೌರವ ನನಗಿದೆ. ದೇಶದಲ್ಲಿರುವ ಪ್ರತಿಯೊಬ್ಬ ಪ್ರಜೆಯು ಸುಖ, ಶಾಂತಿ, ನೆಮ್ಮದಿ, ಸಮೃದ್ಧಿಯಿಂದ ಬದುಕಬೇಕು ಎಂಬುದು ನನ್ನ ಕಾಳಜಿ.

ಈ ದೇಶದಲ್ಲಿ ಹುಟ್ಟಿರುವ ಬಗ್ಗೆ ಹೆಮ್ಮೆ ಇದೆ, ಏಕೆಂದರೆ ವೈವಿಧ್ಯತೆಯಲ್ಲಿ ಏಕತೆ ಇರುವ ದೇಶ ಭಾರತ. ಈ ದೇಶದ ಮಣ್ಣಿನ ಮಕ್ಕಳಾದ ನಾವು ದ್ವೇಷದ ಕಾರಣ, ಭಯೋತ್ಪಾದನೆಯ ಕಾರಣಕ್ಕಾಗಿ ಮಣ್ಣಾಗುವುದನ್ನು, ನೋವುಗಳನ್ನು ಅನುಭವಿಸುವುದು ನನಗಿಷ್ಟವಿಲ್ಲ. ಯಾವುದೇ ಯುದ್ಧ ಆದಾಗ ಮಡಿಯುವವರು ಒಂದೆಡೆಯಾದರೆ, ಆಯಾ ದೇಶದ ಬಹುತೇಕರು ವಿವಿಧ ಕಾರಣಗಳಿಗಾಗಿ ನೋವು ಅನುಭವಿಸುವಂತಾಗುತ್ತದೆ.

ಭಾರತದ ಮೇಲೆ ಭಯೋತ್ಪಾದನೆಯ ಕರಿನೆರಳು ಬೀಳದಿರಲಿ, ಶಾಂತಿ, ಸೌಹಾರ್ದ ನೆಲೆಸಲಿ. ಭಯೋತ್ಪಾದನೆ ನಿರ್ಮೂಲನೆಯಾಗಲಿ. ಸಾವು ನೋವು ಇಲ್ಲದಾಗಲಿ ಎನ್ನುವುದಷ್ಟೇ ನನ್ನ ಉದ್ದೇಶ ಎಂದು ರೇಷ್ಮಾ ಹೊಸದಾಗಿ ಪೋಸ್ಟ್ ಮಾಡಿದ್ದಾರೆ.



