ಉಳ್ಳಾಲ : ಉಳ್ಳಾಲದ ಮುನ್ನೂರು ಗ್ರಾಮದ ನೇತ್ರಾವತಿ ನದಿ ತೀರದಲ್ಲಿ ಏ.16 ರಂದು ಪಶ್ಚಿಮ ಬಂಗಾಳ ಮೂಲದ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವ ವಿಚಾರವಾಗಿದ್ದು,ಈಗಾಗಲೇ ಮೂವರು ಆರೋಪಿಗಳ ಬಂಧನ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂಲ್ಕಿ ನಿವಾಸಿ ಹಾಗೂ ಆಟೋ ಚಾಲಕ ಪ್ರಭುರಾಜ್ (38), ಕುಂಪಲ ನಿವಾಸಿ ಹಾಗೂ ಇಲೆಕ್ಟ್ರೀಷಿಯನ್ ಮಿಥುನ್ (30), ಮತ್ತು ಮಂಗಳೂರು ನಿವಾಸಿ ಮಣಿ (30) ಎಂಬವರನ್ನು ಬಂಧನ ಮಾಡಲಾಗಿದೆ. ಸದ್ಯ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ಆರೋಪಿಗಳಿಗೆ ನಾಲ್ಕು ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ತನಿಖೆ ವೇಳೆ ಆರೋಪಿಗಳ ಮತ್ತಷ್ಟು ಅಪರಾಧ ಕೃತ್ಯಗಳು ಬಯಲು
ಇನ್ನು ಇತ್ತ ಎಲೆಕ್ಟ್ರೀಷಿಯನ್ ಕೆಲಸ ಮಾಡುತ್ತಿದ್ದ ಆರೋಪಿ ಮಿಥುನ್ ವಿರುದ್ಧ ಲೈಂಗಿಕ ಕಿರುಕುಳ ಸೇರಿದಂತೆ ಎರಡು ಪ್ರಕರಣ ಪಾಂಡೇಶ್ವರ ಮಹಿಳಾ ಠಾಣೆ ಮತ್ತು ಉಳ್ಳಾಲ ಠಾಣೆಯಲ್ಲಿ ದಾಖಲಾಗಿದ್ದು, ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಮಣಿ ಮೇಲೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿದೆ. ರಿಕ್ಷಾ ಚಾಲಕ ಪ್ರಭುರಾಜ್ ವಿರುದ್ದ ಯಾವುದೇ ಪ್ರಕರಣಗಳಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಮುಕರ ಕೈಗೆ ಯುವತಿಯ ಸಿಕ್ಕಿದ್ದು ಹೇಗೆ ಗೊತ್ತಾ..?
ಹೌದು ಸಂತ್ರಸ್ತೆ ಯುವತಿಯು ಸುಮಾರು 3 ತಿಂಗಳ ಹಿಂದೆ ಪ್ರಿಯತಮನ ಜತೆ ಕೇರಳಕ್ಕೆ ಬಂದಿದ್ದು ಪ್ಲೈವುಡ್ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದಳು. ಏ.16ರಂದು ಇಬ್ಬರ ನಡುವೆ ಜಗಳ ನಡೆದಿದೆ. ಈ ವೇಳೆ ಪ್ರಿಯತಮ ಜಗಳ ಮಾಡಿ ಯುವತಿಯ ಮೊಬೈಲ್‌ನ್ನು ಒಡೆದು ಹಾಕಿ ಮನೆಯಿಂದ ಹೊರಹಾಕಿದ್ದಾನೆ. ಇದರಿಂದ ನೊಂದ ಯುವತಿ ಕೇರಳದಿಂದ ಮಂಗಳೂರಿಗೆ ಬರುವ ರೈಲು ಹತ್ತಿದ್ದಳು. ಮಂಗಳೂರಿನಲ್ಲಿ ಇಳಿದ ಆಕೆ ಊರಿಗೆ ಹೋಗಲು ಹಣವಿಲ್ಲದೆ ಅಸಹಾಯಕಳಾಗಿದ್ದಳು. ಇದನ್ನು ಆಟೋ ಚಾಲಕ ಪ್ರಭುರಾಜ್ ಜೊತೆಗೆ ಹೇಳಿಕೊಂಡಿದ್ದಾಳೆ.ಆದರೆ ಅದನ್ನೇ ಆತ ದುರ್ಬಳಕೆ ಮಾಡಿಕೊಂಡು ತನ್ನ ಇನ್ನುಳಿದ ಇಬ್ಬರು ಸ್ನೇಹಿತರ ಜೊತೆ ಸೇರಿ ಈ ನೀಚ ಕೃತ್ಯವನ್ನು ಎಸಗಿದ್ದಾನೆ.
ತಂಗಿಯನ್ನು ಸುರಕ್ಷಿತವಾಗಿ ಮನೆಗೆ ಕಳಸಿಕೊಡುವಂತೆ ಬೇಡಿಕೊಂಡಿದ್ದ ಅಕ್ಕ
ಇತ್ತ ಆರೋಪಿಗಳಲ್ಲಿ ಓರ್ವನಾದ ಪ್ರಭುರಾಜ್ ಎಂಬಾತ ಸಂತ್ರಸ್ತೆಯ ಮೊಬೈಲ್ ರಿಪೇರಿ ಮಾಡಿಕೊಟ್ಟು ಪಶ್ಚಿಮ ಬಂಗಾಳದಲ್ಲಿರುವ ಸಹೋದರಿಗೆ ಕರೆ ಮಾಡುವಂತೆ ತಿಳಿಸಿದ್ದ. ತಂಗಿ ಊರಿಗೆ ಬರುವ ಇಂಗಿತ ವ್ಯಕ್ತಪಡಿಸುತ್ತಿದ್ದಂತೆ ಆಟೊ ರಿಕ್ಷಾ ಚಾಲಕನ ಸಹಾಯ ಯಾಚಿಸಿದ ಅಕ್ಕ, 2 ಸಾವಿರವನ್ನು ಗೂಗಲ್ ಪೇ ಮಾಡಿ ರೈಲು ಹತ್ತಿಸುವಂತೆ ತಿಳಿಸಿದ್ದಳು. ಇತ್ತ ಆರೋಪಿಯು ಪಶ್ಚಿಮ ಬಂಗಾಳದ ರೈಲು ತಡವಾಗಿದೆ ಎಂದು ನಂಬಿಸಿ ಆಕೆಯನ್ನು ಸುಮಾರು 6 ಗಂಟೆ ರಿಕ್ಷಾದಲ್ಲೇ ಸುತ್ತಾಡಿಸಿ ಮತ್ತು ಬರುವ ಪಾನೀಯ ಕುಡಿಸಿ ತಡರಾತ್ರಿ ವೇಳೆ ಸ್ನೇಹಿತರ ಜೊತೆ ಸೇರಿ ಅತ್ಯಾಚಾರವೆಸಗಿದ್ದಾರೆ ಎಂದು ತನಿಖೆ ವೇಳೆ ಗೊತ್ತಾಗಿದೆ.
ಸದ್ಯ ಆಸ್ಪತ್ರೆಯಲ್ಲಿ ಯುವತಿ ಚೇತರಿಸಿಕೊಳ್ಳುತ್ತಿದ್ದು ಚಿಕಿತ್ಸೆ ಮುಂದುವರಿಸಲಾಗಿದೆ. ಇದುವರೆಗೂ ಆಕೆಯ ಮನೆಯಿಂದ ಯಾರೂ ಬಂದಿಲ್ಲ. ಆಕೆಯನ್ನು ಊರಿನಿಂದ ಕರೆತಂದ ಪ್ರಿಯತಮನ ವಿಚಾರಣೆಯೂ ನಡೆದಿಲ್ಲ ಎಂದು ಹೇಳಲಾಗುತ್ತಿದೆ. ಸದ್ಯ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಏ.25ರವರೆಗೆ ಪೊಲೀಸ್ ವಶಕ್ಕೆ ನೀಡಲಾಗಿದೆ.



