ರಾಮನಗರ: ಮಾಜಿ ಡಾನ್ ಮುತ್ತಪ್ಪ ರೈ ಕಿರಿಯ ಪುತ್ರನಾಗಿರುವ ರಿಕ್ಕಿ ರೈ ಮೇಲೆ ದುಷ್ಕರ್ಮಿ ಫೈರಿಂಗ್ ಮಾಡಿರುವಂತಹ ಘಟನೆ ರಾಮನಗರ ತಾಲೂಕಿನ ಬಿಡದಿಯ ಮುತ್ತಪ್ಪ ರೈ ಮನೆ ಬಳಿ ನಡೆದಿದೆ. ಬಿಡದಿಯಿಂದ ಬೆಂಗಳೂರಿಗೆ ಕಾರಿನಲ್ಲಿ ತೆರಳುತ್ತಿದ್ದ ರಿಕ್ಕಿ ರೈಯವರು ಪ್ರತಿ ಬಾರಿ ಅವರೇ ಕಾರು ಚಲಾಯಿಸುತ್ತಿದ್ದರು.
ಇದೇ ಕಾರಣಕ್ಕೆ ಡ್ರೈವಿಂಗ್ ಸೀಟ್ ಟಾರ್ಗೆಟ್ ಮಾಡಿರುವ ದುಷ್ಕರ್ಮಿಗಳು ಮನೆಯ ಕೂಗಳತೆ ದೂರದಲ್ಲೇ ರಿಕ್ಕಿ ಮೇಲೆ ಎರಡು ಸುತ್ತಿನ ಗುಂಡಿನ ದಾಳಿ ಮಾಡಿದ್ದಾರೆ. ಆದರೆ ದಾಳಿ ನಡೆಯವ ರಿಕ್ಕಿ ಕಾರಿನ ಹಿಂಬದಿ ಸೀಟ್‌ನಲ್ಲಿದ್ದು ಅವರ ಮೂಗು, ಕೈಗೆ ಗುಂಡು ತಾಕಿದೆ. ಸದ್ಯ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ ರಾತ್ರಿ ಸುಮಾರು 11.30ಕ್ಕೆ ಈ ಘಟನ ಸಂಭವಿಸಿದೆ ಅನ್ನುವ ಮಾಹಿತಿಗಳು ಲಭ್ಯವಾಗಿದೆ.

ಬಿಡದಿ ಮನೆಯಿಂದ ರಿಕ್ಕಿ ಸೇರಿ ಮೂವರು ಕಾರಿನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದರು. ರಿಕ್ಕಿ ರೈ ಜೊತೆಗೆ ಗನ್ ಮ್ಯಾನ್ ಇದ್ದು, ಚಾಲಕ ಕಾರು ಚಲಾಯಿಸ್ತಿದ್ದ. ಹಿಂಬದಿ ಸೀಟ್‌ನಲ್ಲಿ ರಿಕ್ಕಿ ರೈ ಕುಳಿತಿದ್ದರು. ಪೊಲೀಸರ ಮಾಹಿತಿ ಪ್ರಕಾರ 70 ಎಮ್‌ಎಮ್ ಬುಲೆಟ್‌ನ ಶಾಟ್‌ಗನ್ ಬಳಸಿ ಫೈರಿಂಗ್ ನಡೆಸಲಾಗಿದೆ.ಒಂದು ಬಾರಿ ಮಾತ್ರ ಗುಂಡು ಹಾರಿಸಿದ್ದು, ಕಾರಿನ ಡೋರ್ ಸೀಳಿ ಬಂದ ಬುಲೆಟ್, ಡ್ರೈವರ್ ಸೀಟ್ ಕುಶನ್ ಒಳಗೆ ನುಗ್ಗಿದೆ.

ನಂತರ ಕಾರಿನ ಹಿಂಬದಿ ಸೀಟ್‌ನ ಎಡಭಾಗದ ಡೋರ್‌ಗೆ ತಾಗಿದೆ. ಈ ವೇಳೆ ಡ್ರೈವರ್ ಬೆನ್ನಿಗೆ ಹಾಗೂ ರಿಕ್ಕಿ ರೈ ಮೂಗು ಹಾಗೂ ಕೈಗೆ ಗಾಯವಾಗಿದೆ.ಇನ್ನು ರಿಕ್ಕಿ ರೈ ಹತ್ಯೆಗೆ ಪೂರ್ವ ನಿಯೋಜಿತ ಸಂಚು ನಡೆದಿತ್ತಾ..?ಎಂಬ ಅನುಮಾನಗಳು ಹುಟ್ಟುಕೊಂಡಿವೆ. ಎರಡು ದಿನಗಳ ಹಿಂದೆ ರಷ್ಯಾದಿಂದ ಬಂದಿರುವ ರಿಕ್ಕಿ ರೈ ಬಿಡದಿ ಮನೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ. ಈ ವೇಳೆ ಹಿಂಬಾಲಿಸಿ ಕಾದು ಕೃತ್ಯ ಎಸಗಲಾಗಿದೆ.

ರಿಕ್ಕಿ ಬರೊದನ್ನೇ ಕಾದು ಜಾಗವನ್ನು ಗುರುತಿಸಿಕೊಳ್ಳಲಾಗಿದೆ. ಮೇಲ್ನೋಟಕ್ಕೆ ಪ್ರೋಪೆಷನಲ್ ಶಾರ್ಪ್ ಶೂಟರ್‌ನಿಂದಲೇ ಅಟ್ಯಾಕ್ ನಡೆದಿದೆ ಅಂತ ಹೇಳಲಾಗುತ್ತಿದ್ದು ಅದೃಷ್ಟವಶಾತ್ ರಿಕ್ಕಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಪರಿಶೀಲನೆಯ ವೇಳೆ ದುಷ್ಕರ್ಮಿಯ ಕ್ಲ್ಯೂ ಸಿಕ್ಕಿದೆ ಎನ್ನಲಾಗುತ್ತಿದೆ. ಜತೆಗೆ ಎರಡು ಬುಲೆಟ್ ಹಾಗೂ ಒಂದು ಮೊಬೈಲ್ ಪತ್ತೆಯಾಗಿದ್ದು, ಕಿರಾತಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.



