ಬಂಟ್ವಾಳ: ತೆಂಕುತಿಟ್ಟಿನ ಅಗ್ರಮಾನ್ಯ ಹಾಸ್ಯಗಾರರಲ್ಲಿ ಒಬ್ಬರಾಗಿ ಜನಮಾನಸದಲ್ಲಿ ಹೆಸರುವಾಸಿಯಾದ ದಿ. ಬಂಟ್ವಾಳ ಜಯರಾಮ ಆಚಾರ್ಯ ಅವರಿಗೆ ಪುಳಿಂಚ ಸೇವಾ ಪ್ರತಿಷ್ಠಾನ ಮರಣೋತ್ತರ ಪ್ರಶಸ್ತಿ ಘೋಷಿಸಿದೆ.
ಯಕ್ಷಗಾನ ಕ್ಷೇತ್ರದಲ್ಲಿ 50 ವರ್ಷಗಳ ಕಲಾಸೇವೆ ನೀಡಿದ್ದ ಇವರು ತಮ್ಮ 67ನೇ ವಯಸ್ಸಿನಲ್ಲಿ ಇತ್ತೀಚೆಗೆ ನಿಧನರಾದರು.
1957ರಲ್ಲಿ ಬಂಟ್ವಾಳ ದಿ. ಗಣಪತಿ ಆಚಾರ್ಯ ಮತ್ತು ಭವಾನಿ ದಂಪತಿಯ ಮಗನಾಗಿ ಜನಿಸಿದ ಇವರು, ಏಳನೇ ತರಗತಿಗೆ ಓದು ನಿಲ್ಲಿಸಿ ಪಡ್ರೆ ಚಂದು ಅವರಿಂದ ನಾಟ್ಯ ಹಾಗೂ ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರರಿಂದ ಹಾಸ್ಯವೇಷದ ಸೂಕ್ಷ್ಮತೆಗಳನ್ನು ಅಭ್ಯಸಿಸಿದರು.

ಅಮ್ಟಾಡಿ, ಸುಂಕದಕಟ್ಟೆ, ಸೊರ್ನಾಡು, ಕಟೀಲು, ಪುತ್ತೂರು, ಕದ್ರಿ, ಕುಂಬ್ಳೆ, ಸುರತ್ಕಲ್, ಎಡನೀರು, ಹೊಸನಗರ, ಹನುಮಗಿರಿ ಹೀಗೆ ಹಲವು ಮೇಳಗಳಲ್ಲಿ ಸುದೀರ್ಘ ತಿರುಗಾಟ ನಡೆಸಿ, ಬಾಲಗೋಪಾಲದಿಂದ ಪ್ರಾರಂಭಿಸಿ ವಿಜಯ, ಮಕರಂದ, ದಾರುಕ, ಬಾಹುಕ, ರಕ್ಕಸದೂತ, ನಾರದ ಹಾಗೂ ಎಲ್ಲಾ ಕನ್ನಡ-ತುಳು ಪ್ರಸಂಗಗಳ ಹಾಸ್ಯಪಾತ್ರಗಳಲ್ಲಿ ಅಭಿನಯಿಸಿ ಜನಮೆಚ್ಚುಗೆ ಗಳಿಸಿದ್ದರು.
ಇವರ ಕಲಾಸೇವೆಯನ್ನು ಗೌರವಿಸಿ ಪುಳಿಂಚ ಸೇವಾ ಪ್ರತಿಷ್ಠಾನವು ಅವರಿಗೆ ಮರಣೋತ್ತರ ಪ್ರಶಸ್ತಿಯನ್ನು ಘೋಷಿಸಿದೆ



