ಬಂಟ್ವಾಳ: ಒಂದು ಕಡೆ ನೇತ್ರಾವತಿ ನದಿ ಹರಿಯತ್ತಿದ್ದರೆ, ಹತ್ತಿರದಲ್ಲೇ ಕೈಲಾಸದ ಒಡೆಯ ಪರಮೇಶ್ವರನ ದೇವಸ್ಥಾನ, ಶಿವ ಕ್ಷೇತ್ರಕ್ಕೆ ಸ್ವಲ್ಪವೇ ದೂರದಲ್ಲಿ, ಹಿಂದೂ ರುದ್ರಭೂಮಿ ನಿರ್ಮಾಣಕ್ಕೆ ಕಳೆದ ಎರಡು ದಶಕಗಳಿಗಿಂತಲೂ ಹಿಂದೆ ಸರಕಾರದಿಂದ 2.53 ಎಕ್ರೆ ಭೂಮಿ ಮಂಜೂರಾಗಿದ್ದರೂ, ಈ ಭಾಗದಲ್ಲಿ ಸ್ಮಶಾನ ನಿರ್ಮಿಸದೇ ಗ್ರಾಮಸ್ಥರು ಎರಡು ಗ್ರಾಮಗಳನ್ನು ದಾಟಿ ಅಂತ್ಯಕ್ರಿಯೆ ಮಾಡುವಂತಾಗಿದೆ.
ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮದ ಮಠದಬೆಟ್ಟು ಬಳಿ ೨.೫೩ ಎಕ್ರೆ ಭೂಮಿ ಸುಮಾರು ೨೦ ವರ್ಷಗಳ ಹಿಂದೆಯೇ ಹಿಂದೂ ರುದ್ರಭೂಮಿ ನಿರ್ಮಾಣಕ್ಕೆ ಮಂಜೂರಾಗಿರುತ್ತದೆ. ಆದರೆ ಗ್ರಾಮ ಪಂಚಾಯತ್ ಸ್ವಂತ ನಿಧಿ, ಸಿಎಸ್‌ಆರ್ ನಿಧಿ, ಜನಪ್ರತಿನಿಧಿಗಳ ವಿಶೇಷ ಅನುದಾನ, ತಾಲೂಕು ಪಂಚಾಯತ್ ಅನುದಾನ, ಜಿಲ್ಲಾ ಪಂಚಾಯತ್ ಅನುದಾನ ಹೀಗೆ ಸರಕಾರದಿಂದ ಸ್ಮಶಾನ ನಿರ್ಮಾಣಕ್ಕೆ ಹಲವಾರು ವ್ಯವಸ್ಥೆ ಇದ್ದರೂ ಈ ಗ್ರಾಮದಲ್ಲಿ ಸ್ಮಶಾನ ನಿರ್ಮಾಣ ವ್ಯವಸ್ಥೆ ಇನ್ನೂ ಆಗಿಲ್ಲ.
ಪಂಚಾಯತ್ ವತಿಯಿಂದ ಸ್ಮಶಾನ ನಿವೇಶನದ ಬಳಿ ಪುಟ್ಟ ಕಾಂಕ್ರೀಟ್ ರಸ್ತೆ, ಮೋರಿ ವ್ಯವಸ್ಥೆ ಮಾತ್ರ ಆಗಿದ್ದು, ಉಳಿದ ಪ್ರದೇಶದಲ್ಲಿ ಸಂಪೂರ್ಣ ಅರಣ್ಯ ಪ್ರದೇಶದಂತಾಗಿದೆ. ಸುತ್ತಲೂ ಮರಗಳು ಹೆಮ್ಮರವಾಗಿ ಬೆಳೆದಿದೆ. ಕಾಂಕ್ರೀಟ್ ರಸ್ತೆಯ ನಂತರ ಸರಿಯಾದ ದಾರಿ ವ್ಯವಸ್ಥೆ ಇಲ್ಲ. ಈ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಕ್ರಮ ಆಗದೇ ನಿವೇಶನ ಸಂಪೂರ್ಣ ಅವ್ಯವಸ್ಥೆಯಲ್ಲಿದೆ.
ಬಂಟ್ವಾಳದ ಸ್ಮಶಾನವೇ ಆಸರೆ : ಸರಪಾಡಿಯಲ್ಲಿ ಸ್ಮಶಾನ ಇಲ್ಲದ ಕಾರಣ ಈ ಭಾಗದವರು ಸುಮಾರು ೧೮ ಕಿಲೋ ಮೀಟರ್ ದೂರದಲ್ಲಿರುವ ಬಂಟ್ವಾಳ ಬಡ್ಡಕಟ್ಟೆಯಲ್ಲಿರುವ ಸ್ಮಶಾನವನ್ನೇ ಅವಲಂಬಿಸಿರಬೇಕಾಗಿದೆ. ಮಳೆಗಾಲದಲ್ಲಿ ಈ ಭಾಗದವರು ತುಂಬಾ ನರಕಯಾತನೆ ಪಡುತ್ತಿದ್ದಾರೆ. ಒಂದು ಕಡೆ ವಾಹನದ ವ್ಯವಸ್ಥೆಯಾಗಬೇಕು. ಗುಡ್ಡ ಪ್ರದೇಶದ ಭೂಮಿ ಇದ್ದವರು ಅವರ ಜಾಗದಲ್ಲಿಯೇ ತಮ್ಮವರ ಅಂತಿಮ ಕಾರ್ಯವನ್ನು ಮಾಡುತ್ತಾರೆ. ಆದರೆ ಸ್ವಲ್ಪ ಜಾಗ ಇದ್ದವರಿಗೆ ಬಂಟ್ವಾಳದ ಬಡ್ಡಕಟ್ಟೆ ಸ್ಮಶಾನವೇ ಆಸರೆಯಾಗಿರುತ್ತದೆ. ಮಧ್ಯದಲ್ಲಿ ಯಾವುದೇ ಸ್ಮಶಾನದ ವ್ಯವಸ್ಥೆ ಇಲ್ಲ.
ಸರಕಾರದಿಂದ ಸ್ಮಶಾನ ನಿರ್ಮಾಣಕ್ಕೆ ಎಷ್ಟೊಂದು ವ್ಯವಸ್ಥೆ ಇದ್ದರೂ, ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಹಿಂಜರಿತದಿಂದ ೨೦ ವರ್ಷಗಳ ಹಿಂದೆಯೇ ಸರಕಾರದಿಂದ ಭೂಮಿ ದೊರೆತಿದ್ದರೂ ಸರಪಾಡಿ ಗ್ರಾಮಕ್ಕೆ ಸ್ಮಶಾನ ಇನ್ನೂ ಒದಗಿ ಬಂದಿಲ್ಲ. ಆದಷ್ಟು ಬೇಗ ಈ ಭಾಗದಲ್ಲಿ ಸ್ಮಶಾನದ ವ್ಯವಸ್ಥೆಯಾಗಲಿ.
ಸರಪಾಡಿ ಗ್ರಾಮದಲ್ಲಿ ಸ್ಮಶಾನ ನಿರ್ಮಾಣಕ್ಕೆ ಸರಕಾರಿ ಜಮೀನು ೨.೫೩ ಎಕ್ರೆ ಮಂಜೂರಾಗಿದೆ. ಈ ಜಮೀನು ಗುಡ್ಡಪ್ರದೇಶವಾಗಿದ್ದು, ಪೊದೆಗಳು ದೊಡ್ಡದಾಗಿ ಬೆಳೆಯದಂತೆ ಪ್ರತೀವರ್ಷ ಕೆಲಸ ಮಾಡಿಸುತ್ತಿದ್ದೇವೆ. ಅಷ್ಟೇ ಅಲ್ಲದೇ ಪಂಚಾಯತ್ ವತಿಯಿಂದ ಮುಖ್ಯ ರಸ್ತೆಯ ಸಮೀಪದಿಂದ ಸ್ಮಶಾನದ ರಸ್ತೆಗೆ ಕಾಂಕ್ರಿಟೀಕರಣ ರಸ್ತೆ ಮಾಡಲಾಗಿದೆ. ಗುಡ್ಡದ ಮೇಲ್ಭಾಗದಲ್ಲಿ ಜೆಸಿಬಿ ಮೂಲಕ ಸಮತಟ್ಟು ಮಾಡಿರುತ್ತೇವೆ. ಸ್ಮಶಾನದ ಭೂಮಿಯ ಸರ್ವೆ ಕೆಲಸ ಆಗಿರುತ್ತದೆ. ಪಂಚಾಯತ್‌ನ ಆಡಳಿತ ಮಂಡಳಿ ಸದಸ್ಯರ ಬೆಂಬಲ ಇದ್ದು, ಸ್ಮಶಾನ ನಿರ್ಮಾಣದ ಕೆಲಸ ಮಾಡಲಿದ್ದಾರೆ. ದೊಡ್ಡ ಮಟ್ಟದ ಅನುದಾನ ಬೇಕಿರುವುದರಿಂದ ಮುಂದಿನ ದಿನಗಳಲ್ಲಿ ಆದಷ್ಟು ಬೇಗ ಕೆಲಸ ಮಾಡಲು ಪ್ರಯತ್ನಿಸಲಾಗುವುದು.- ಅಭಿವೃದ್ಧಿ ಅಧಿಕಾರಿ, ಸರಪಾಡಿ ಗ್ರಾಮ ಪಂಚಾಯತ್.
ಇಪ್ಪತ್ತು ವರ್ಷಗಳ ಹಿಂದೆಯೇ ಸರಕಾರದಿಂದ ಸರಪಾಡಿಯಲ್ಲಿ ಸ್ಮಶಾನ ರಚನೆಗೆ ಜಮೀನು ದೊರೆತಿರುತ್ತದೆ. ಸ್ಥಿತಿವಂತರಿಗೆ ಬೇಕಾದಷ್ಟು ಜಮೀನು ಇರುವುದರಿಂದ ಅವರಿಗೆ ಇದರ ಅಗತ್ಯವೂ ಇಲ್ಲದಿರುವುದರಿಂದ ಇದನ್ನು ಮುನ್ನಡೆಸಿಕೊಂಡು ಹೋಗಲು ಮುಂದೆ ಬರುವುದಿಲ್ಲ. ಸ್ಮಶಾನ ಇಲ್ಲದಿರುವುದರಿಂದ ಬಡವರು ಸುಮಾರು ೧೮ ಕಿಲೋ ಮೀಟರ್ ದೂರದಲ್ಲಿರುವ ಬಂಟ್ವಾಳ ಬಡ್ಡಕಟ್ಟೆ ಸ್ಮಶಾನವನ್ನೇ ಅವಲಂಬಿಸಿರುತ್ತಾರೆ. ಆದಷ್ಟು ಬೇಗ ಈ ಊರಿಗೆ ಸ್ಮಶಾನವನ್ನು ಒದಗಿಸಿಕೊಟ್ಟರೆ ಈ ಭಾಗದ ಜನರಿಗೆ ತುಂಬಾ ಒಳ್ಳೆಯದಾಗುತ್ತದೆ.- ಚಂದ್ರ, ಬಲಯೂರು, ಸ್ಥಳೀಯರು.




