ಬಂಟ್ವಾಳ: ದಾನವಾಗಿ ಸಿಕ್ಕಿರುವ ನಿವೇಶನದಲ್ಲಿ ಅಂಗನವಾಡಿ ಕೇಂದ್ರ ನಿರ್ಮಾಣವಾಗಿದ್ದು, ಕಾಲಾನಂತರ ದಾನ ಮಾಡಿದವರು ನಿವೇಶನವನ್ನು ಮಾರಿದಾಗ ಅಂಗನವಾಡಿ ಕಟ್ಟಡ ಇರುವ ಭೂಮಿ ಖಾಸಗಿಯವರ ಪಾಲಾಗಿದೆ. ಅಂಗನವಾಡಿಗೆ ದಾನವಾಗಿರುವ ನಿವೇಶನದ ದಾಖಲೆಯು ಬೇರೆ ಕಡೆ ಇದ್ದು ಈಗ ಕಟ್ಟಡ ಎಲ್ಲೋ… ನಿವೇಶನ ಎಲ್ಲೋ ಆಗಿ ಅಂಗನವಾಡಿ ಕೇಂದ್ರವು ಸ್ಥಳದ ಗೊಂದಲದಿಂದಾಗಿ ತ್ರಿಶಂಕು ಸ್ಥಿತಿಯಲ್ಲಿದೆ.

ಇದು ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ತೊಡಂಬಿಲ ಅಂಗನವಾಡಿ ಕೇಂದ್ರದ ಕಥೆ. ಊರಿನಲ್ಲೊಂದು ಅಂಗನವಾಡಿ ಕೇಂದ್ರ ಇರಬೇಕು, ಗ್ರಾಮೀಣ ಭಾಗದ ಪುಟ್ಟಮಕ್ಕಳಿಗೆ ಶಿಕ್ಷಣ ಸಿಗಬೇಕೆಂದು ದೃಷ್ಟಿಯಿಂದ ಸುಮಾರು ಮೂರು ದಶಕಗಳ ಹಿಂದೆ ದಿ| ಸುಂದರ ರೈ ಎಂಬವರು ಸುಮಾರು ಐದು ಸೆಂಟ್ಸ್ ಜಾಗ ಬಂಟ್ವಾಳ ಶಿಶುಅಭಿವೃದ್ಧಿ ಯೋಜನಾಧಿಕಾರಿಯವರ ಹೆಸರಿಗೆ ದಾನವಾಗಿ ನೀಡಿರುತ್ತಾರೆ. ಆದರೆ ಕೆಲವು ವರ್ಷಗಳ ನಂತರ ತಮ್ಮಲ್ಲಿರುವ ಇತರ ಜಾಗವನ್ನು ಖಾಸಗಿಯಾಗಿ ಮಾರಾಟ ಮಾಡುವಾಗ ಕೈಬರಹದ ಪಹಣಿ ಪತ್ರ ನೀಡುತ್ತಿರುವ ಸಂದರ್ಭ ಅವರ ಇತರ ಜಾಗದ ದಾಖಲೆಯೊಂದಿಗೆ ಅಂಗನವಾಡಿ ಕೇಂದ್ರದ ನಿವೇಶನದ ದಾಖಲೆಯು ಒಳಗೊಂಡಿದ್ದು, ಅದು ಖಾಸಗಿ ವ್ಯಕ್ತಿಯ ಪಾಲಾಗಿದೆ.


ನಂತರ ಅಂಗನವಾಡಿ ಕೇಂದ್ರಕ್ಕೆ ದಾನವಾಗಿ ನೀಡಿರುವ ನಿವೇಶನದ ದಾಖಲೆಯು ಪಚ್ಚಿನಡ್ಕ ಸಮೀಪ ಸರ್ವೇ ನಂಬರ್ 12/2, ಖಾತೆ ಸಂಖ್ಯೆ 384, ಎಂಟಿಎನ್ 5/9495,27-6-1994ರಲ್ಲಿ ಸ್ವಾಧೀನತೆಯಾಗಿರುತ್ತದೆ.
ಸರಕಾರಿ ದಾಖಲೆಯಲ್ಲಿ ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರ ಹೆಸರಿನಲ್ಲಿ ಆರ್‌ಟಿಸಿಯಾದರೂ ಬಂಟ್ವಾಳ ಶಿಶು ಅಭಿವೃದ್ಧಿ ಇಲಾಖೆಗೆ ಸರಿಯಾದ ನಿವೇಶನ ಸಿಗದಿರುವುದರಿಂದಾಗಿ ಗೊಂದಲವಾಗಿದೆ.

ಖಾಸಗಿ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ತೊಡಂಬಿಲ ಅಂಗನವಾಡಿ ಕೇಂದ್ರದ ಹಿಂಭಾಗ ಬೃಹತ್ ಗಾತ್ರದ ಮರಗಳಿಂದ ಕೂಡಿರುತ್ತದೆ. ಅಂಗನವಾಡಿ ಕೇಂದ್ರ ಎರಡೂ ಬದಿಯ ಭಾಗದಲ್ಲಿ ಕಾಡಿನಂತಾಗಿದೆ. ಅಷ್ಟೇ ಅಲ್ಲದೇ ಅಂಗನವಾಡಿ ಕೇಂದ್ರದ ಸನಿಹದಲ್ಲೇ ಬೃಹತ್ ಆಲದ ಮರ ಆವರಿಸಿದೆ. ಇದರಿಂದಾಗಿ ಅಂಗನವಾಡಿ ಕಟ್ಟಡದ ಹಿಂದುಗಡೆ ಬಿರುಕು ಬಿಟ್ಟಿದೆ. ಇದು ಅಂಗನವಾಡಿಯ ಹಿಂದುಗಡೆಯಾದರೆ ಅಂಗನವಾಡಿಯ ಎದುರುಗಡೆ ಕೆಲವೇ ದೂರದಲ್ಲಿ ೧೨ ಅಡಿ ಎತ್ತರದಲ್ಲಿ ಬಿ.ಸಿ.ರೋಡು – ಪೊಳಲಿ ಮುಖ್ಯರಸ್ತೆ ಹಾದು ಹೋಗಿರುತ್ತದೆ. ರಸ್ತೆಯ ಮೇಲ್ಭಾಗದಲ್ಲಿ ನೋಡುವಾಗ ಈ ಅಂಗನವಾಡಿ ಕೇಂದ್ರದ ಮೇಲ್ಚಾವಣಿ ಮಾತ್ರ ಕಾಣುತ್ತಿದ್ದು ಸುತ್ತಲೂ ಕಾಡು ಮರಗಳಿಂದ ಕೂಡಿರುತ್ತದೆ.

ನಿರಂತರ ವಾಹನ ಸಂಚಾರ – ಅಪಾಯಕಾರಿ ತಿರುವು : ಮುಖ್ಯರಸ್ತೆಯು ಅಂಗನವಾಡಿ ಕೇಂದ್ರದ ಬಳಿಯೇ ಇಳಿಜಾರಾಗಿದ್ದು ಬೃಹತ್ ತಿರುವುವನ್ನು ಒಳಗೊಂಡಿದೆ. ತಿರುವು ಬಳಿಯಲ್ಲೇ ಅಂಗನವಾಡಿ ಕೇಂದ್ರಕ್ಕೆ ತೆರಳುವ ದಾರಿ ಇದ್ದು, ಯಾವುದೇ ಕಂಪೌಂಡ್ ಮತ್ತು ಗೇಟ್ ಇಲ್ಲ. ರಸ್ತೆಯ ಬದಿಯಲ್ಲಿ ಅಂಗನವಾಡಿ ಕೇಂದ್ರ ಇರುವ ಬಗ್ಗೆ ಯಾವುದೇ ಮಾರ್ಗ ಸೂಚಿಯನ್ನೂ ಅಳವಡಿಸಿಲ್ಲ. ಬಿ.ಸಿ.ರೋಡು-ಪೊಳಿಲಿ ರಸ್ತೆಯಲ್ಲಿ ಮೂವತ್ತು ವರ್ಷಗಳ ಹಿಂದೆ ರಸ್ತೆಯು ಅಷ್ಟೇನು ಅಗಲ ಇಲ್ಲದೇ, ವಾಹನ ಸಂಚಾರವೂ ಕಡಿಮೆ ಇತ್ತು. ಆ ಕಾಲದಲ್ಲಿ ಈ ನಿವೇಶನದಲ್ಲಿರುವ ಅಂಗನವಾಡಿಗೆ ಏನೂ ಸಮಸ್ಯೆ ಇರಲಿಲ್ಲ. ಆದರೆ ಈಗ ಅಗಲೀಕರಣವಾಗಿ ನಿರಂತರವಾಗಿ ವಾಹನ ಸಂಚರಿಸುತ್ತಿರುತ್ತದೆ. ಒಂದು ಕಡೆ ಮುಖ್ಯ ರಸ್ತೆಯ ತಿರುವು ಬಳಿ ಆಳವಾದ ತಗ್ಗು ಪ್ರದೇಶದಲ್ಲಿ ದಟ್ಟ ಮರಗಳ ಮಧ್ಯೆ ಅಂಗನವಾಡಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ ಇದು ಕಳ್ಳಿಗೆ ಗ್ರಾಮದ ತೊಡಂಬಿಲ ಅಂಗನವಾಡಿ ಕೇಂದ್ರದ ದುಸ್ಥಿತಿಯಾಗಿದ್ದು ಖಾಸಗಿ ಸ್ಥಳದಲ್ಲಿರುವ ಅಂಗನವಾಡಿ ಕೇಂದ್ರ ಭಾರೀ ಅಪಾಯವನ್ನು ಆಹ್ವಾನಿಸುತ್ತಿದೆ.ತೊಂಡಬಿಲ ಅಂಗನವಾಡಿ ಕೇಂದ್ರದಲ್ಲಿ ಸುಮಾರು ೧೫ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪುಟ್ಟ ಮಕ್ಕಳ ವಿದ್ಯಾಭ್ಯಾಸ ಕ್ಕಾಗಿ ನಿರ್ಮಿಸಿರುವ ಈ ಅಂಗನವಾಡಿಯನ್ನು ಸರಿಯಾದ ದಾಖಲೆಗಳೊಂದಿಗೆ ನಿರ್ಮಾಣ ಮಾಡಿದರೆ ಪ್ರಯೋಜನವಾದೀತು. ಇಲ್ಲವಾದಲ್ಲಿ ತೊಂದರೆ ಕಟ್ಟಿಟ್ಟ ಬುತ್ತಿ. ಹಾಗಾಗಿ ಇಲಾಖೆಯು ಈ ಕುರಿತು ಗಮನ ಹರಿಸಬೇಕಾಗಿದೆ.
ಮೂವತ್ತು ವರ್ಷಗಳ ಹಿಂದೆ ದಾನವಾಗಿ ನೀಡಿರುವ ಭೂಮಿಯಲ್ಲಿ ಅಂಗನವಾಡಿ ನಿರ್ಮಾಣವಾಗಿದ್ದು, ನಂತರದ ದಿನಗಳಲ್ಲಿ ದಾಖಲೆಗಳ ಬದಲಾವಣೆಯಿಂದಾಗಿ ಅಂಗನವಾಡಿ ಕೇಂದ್ರ ಕಟ್ಟಡ ಒಂದು ಕಡೆ, ನಿವೇಶನ ಬೇರೊಂದು ಕಡೆಯಾಗಿದೆ. ಇದರಿಂದಾಗಿ ಸಂಪೂರ್ಣ ಗೊಂದಲವಾಗಿದ್ದು, ಇಲಾಖೆಯ ಗಮನಕ್ಕೂ ತಂದಿದ್ದೇನೆ. ನಿವೇಶನ ಅದಲು ಬದಲಾಗಿರುವುದನ್ನು ಸಂಬಂಧಪಟ್ಟ ಇಲಾಖೆಯು ಕೂಡಲೇ ಮುತುವರ್ಜಿ ವಹಿಸಿ ಅಂಗನವಾಡಿ ನಿವೇಶನದ ಸಮಸ್ಯೆ ಬಗೆಯರಿಸಬಹುದು.- ತುಳಸಿ, ಶಿಕ್ಷಕಿ, ಅಂಗನವಾಡಿ ಕೇಂದ್ರ ತೊಡಂಬಿಲ
ಕಳ್ಳಿಗೆ ಅಂಗನವಾಡಿ ಕೇಂದ್ರದ ನಿವೇಶನವು ಪಚ್ಚಿನಡ್ಕದ ಬಳಿ ತೋರಿಸುತ್ತದೆ. ಕೈಬರಹದ ದಾಖಲೀಕರಣ ಇರುವ ಸಂದರ್ಭ ಅಂಗನವಾಡಿ ಕೇಂದ್ರದ ಜಾಗವು ರಿಜಿಸ್ಟ್ರೇಶನ್ ಆಗಿರುತ್ತದೆ. ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರ ಹೆಸರಿನಲ್ಲಿ ಆರ್‌ಟಿಸಿಯೂ ಆಗಿರುತ್ತದೆ. ಜಾಗಕ್ಕೆ ಸರಿಯಾದ ಗುರುತು ಇರುವ ದಾಖಲೆ ಇಲ್ಲದಿರುವುದರಿಂದ ಗೊಂದಲದಂತಾಗಿದೆ. ಪಚ್ಚಿನಡ್ಕ ಬಳಿ ಇರುವ ನಿವೇಶನದವರು ಪ್ಲಾಟಿಂಗ್ ಮಾಡುವಾಗ ಅಂಗನವಾಡಿ ಕೇಂದ್ರ ಸರಿಯಾದ ನಿವೇಶನ ಸಿಗಬಹುದು.- ಪ್ರಶಾಂತ್, ಗ್ರಾಮ ಕರಣಿಕರು, ಕಳ್ಳಿಗೆ ಗ್ರಾಮ ಪಂಚಾಯತ್.
ತೊಂಡಂಬಿಲ ಅಂಗನವಾಡಿ ಕೇಂದ್ರವು ೧೯೯೩ರಲ್ಲಿ ಆರಂಭವಾಗಿದೆ. ಸುಂದರ ರೈ ಎಂಬವರು ಐದು ಸೆಂಟ್ಸ್ ಜಾಗ ದಾನ ಪತ್ರ ಮೂಲಕ ನೀಡಿರುತ್ತಾರೆ. ಆದರೆ ಅವರ ಇತರ ಜಾಗ ಮಾರುವ ಸಂದರ್ಭ ಅಂಗನವಾಡಿ ಕೇಂದ್ರದ ಕಟ್ಟಡವೂ ಖಾಸಗಿಯವರ ಜಾಗದೊಳವೆ ಸೇರಿಕೊಂಡಿದೆ. ದಾನವಾಗಿ ನೀಡಿರುವ ಜಾಗ ಪಚ್ಚಿನಡ್ಕದಲ್ಲಿದೆ. ಈಗ ಯಾವ ರೀತಿಯಲ್ಲಿ ಬಗೆಹರಿಸುವುದು ಗೊಂದಲವಾಗಿರುತ್ತದೆ.- ಸುಜಾತ, ಸುಪರ್‌ವೈಸರ್, ಶಿಶು ಅಭಿವೃದ್ಧಿ ಇಲಾಖೆ, ಬಂಟ್ವಾಳ.
ವರದಿ: ಯಾದವ ಕುಲಾಲ್ ಅಗ್ರಬೈಲು



