ಬಂಟ್ವಾಳ: ಬಿ.ಸಿ.ರೋಡಿನ ಎನ್.ಜಿ. ಸರ್ಕಲ್ನಲ್ಲಿ ಗುರುವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟಿದ್ದು, ಮತ್ತೋರ್ವ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತರನ್ನು ಬಂಟ್ವಾಳ ತಾಲೂಕಿನ ನರಿಕೊಂಬು ಸಮೀಪದ ನಾಯಿಲ ನಿವಾಸಿ ಯಶವಂತ್ ಕುಲಾಲ್ ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ದಯಾನಂದ ಅವರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗುರುವಾರ ಸಂಜೆ ಸುಮಾರು 6.30ರ ವೇಳೆಗೆ ಮೆಲ್ಕಾರ್ ಕಡೆಯಿಂದ ಲೊರೆಟ್ಟೊ ಕಡೆಗೆ ಸಾಗುತ್ತಿದ್ದ ಟಿಪ್ಪರ್ ಲಾರಿ, ಮಂಗಳೂರು ಕಡೆಯಿಂದ ಧರ್ಮಸ್ಥಳದತ್ತ ತೆರಳುತ್ತಿದ್ದ ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಸವಾರ ದಯಾನಂದ ಹಾಗೂ ಸಹಸವಾರ ಯಶವಂತ್ ರಸ್ತೆಗೆ ಬಿದ್ದಿದ್ದು, ಟಿಪ್ಪರ್ ಅವರ ಮೇಲೆಯೇ ಹರಿದ ಪರಿಣಾಮ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ತಕ್ಷಣ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಯಶವಂತ್ ಮೃತಪಟ್ಟಿದ್ದಾರೆ. ದಯಾನಂದ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಅಪಘಾತದ ಬಳಿಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಟಿಪ್ಪರ್ ಚಾಲಕ ಪಲ್ಲಮಜಲು ನಿವಾಸಿ ಸಲ್ಮಾನ್ ಫಾರುಕ್ ಅವರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
ಮೃತ ಯಶವಂತ್ ಕುಲಾಲ್ ಅವರು ಮರದ ಕೆಲಸ ಮಾಡುತ್ತಿದ್ದು, ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರ ಕಿರಿಯ ಪುತ್ರಿಯ ಹುಟ್ಟುಹಬ್ಬ ಶುಕ್ರವಾರ ನಿಗದಿಯಾಗಿದ್ದು, ಮನೆಯವರು ಸಂಭ್ರಮದ ಸಿದ್ಧತೆಯಲ್ಲಿದ್ದರು. ಆದರೆ ಅದರ ಮುನ್ನಾದಿನವೇ ಸಂಭವಿಸಿದ ಈ ದುರಂತದಿಂದ ಕುಟುಂಬದ ಸಂತಸ ಕಣ್ಣೀರಿನಲ್ಲಿ ಕರಗಿದೆ.

ಗಾಯಾಳು ದಯಾನಂದ ಅವರು ಹುಲ್ಲು ಕತ್ತರಿಸುವ ಯಂತ್ರದ ಕೆಲಸ ಮಾಡುತ್ತಿದ್ದು, ತಿಂಗಳ ಹಿಂದಷ್ಟೇ ತಾಯಿಯನ್ನು ಕಳೆದುಕೊಂಡಿದ್ದರು. ಇದೀಗ ಅವರು ಜೀವಕ್ಕಾಗಿ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದ್ದಾರೆ.


