ಹೂವಿನಹಡಗಲಿ: ಪಟ್ಟಣದ ಹೊರವಲಯದಲ್ಲಿರುವ ಸಿ ಎನ್ ಜಿ ವಿತರಣಾ ಕೇಂದ್ರದಿಂದ ಕುಡತಿನಿಯ ಪೆಟ್ರೋಲ್ ಬಂಕ್ ಗೆ ಸಾಗಿಸಲಾಗುತ್ತಿದ್ದ ಸಿ ಎನ್ ಜಿ ಲಾರಿಯಲ್ಲಿ ಗುರುವಾರ ಬೆಳಗ್ಗೆ ಗ್ಯಾಸ್ ಸೋರಿಕೆಯಾದ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ.

ಕೆಇಬಿ ಸರ್ಕಲ್ ಬಳಿಯಿಂದ ಸಿ ಎನ್ ಜಿ ತುಂಬಿಕೊಂಡು ಕುಡತಿನಿಯತ್ತ ತೆರಳುತ್ತಿದ್ದ ವೇಳೆ ಮಾರ್ಗಮಧ್ಯೆ ಲಾರಿಯ ಸಿಲಿಂಡರ್ ನ ಕ್ಯಾಪ್ ಸಡಿಲಗೊಂಡ ಪರಿಣಾಮ ಭಾರೀ ಶಬ್ದದೊಂದಿಗೆ ಗ್ಯಾಸ್ ಸೋರಿಕೆಯಾಗಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಚಾಲಕ ತಕ್ಷಣ ಲಾರಿಯನ್ನು ನಿಲ್ಲಿಸಿ ಸುರಕ್ಷಿತವಾಗಿ ಹೊರಗೆ ಬಂದಿದ್ದಾನೆ.

ಲಾರಿಯಲ್ಲಿದ್ದ ಸುಮಾರು 60 ಸಿಲಿಂಡರ್ ಗಳಿಂದ ಅಂದಾಜು 540 ಕೆ.ಜಿ. ಸಿ ಎನ್ ಜಿ ಸಂಪೂರ್ಣವಾಗಿ ಸೋರಿಕೆಯಾಗಿದೆ ಎಂದು ತಿಳಿದುಬಂದಿದೆ.
ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರು. ಘಟನೆ ನಡೆದ ಸ್ಥಳದ ಸುತ್ತಮುತ್ತ ಅಂಗಡಿ-ಮುಂಗಟ್ಟುಗಳು ಇಲ್ಲದ ಕಾರಣ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿ ಸಂಭವಿಸಿಲ್ಲ.

ಆದರೆ ರಸ್ತೆ ಮಧ್ಯೆ ಗ್ಯಾಸ್ ಸೋರಿಕೆಯಾಗಿದ್ದರಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ಸಂಚಾರವನ್ನು ಪುನಃ ಆರಂಭಿಸಲಾಯಿತು.


