ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಟೆಂಕಬೈಲು ಗ್ರಾಮದಲ್ಲಿ ಜಮೀನಿನಲ್ಲಿರುವ ಕೆರೆಯ ಬಳಿ ಪಂಪ್‌ಸೆಟ್ ಎತ್ತಲು ಹೋಗಿದ್ದ ವೇಳೆ ಕಾಲು ಜಾರಿ ನೀರು ತುಂಬಿದ್ದ ಕೆರೆಗೆ ಬಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಜುಲೈ 21ರ ಮಂಗಳವಾರ ನಡೆದಿದೆ.

ಮೃತರನ್ನು ಟೆಂಕಬೈಲು ಗ್ರಾಮದ ತುಂಬುಕೋಡುವಿನ ಉಮೇಶ್ (43) ಎಂದು ಗುರುತಿಸಲಾಗಿದೆ. ಮೂಲತಃ ಕೊಪ್ಪ ತಾಲೂಕಿನವರಾದ ಅವರು ತೋಟದ ಕೆಲಸದ ನಿಮಿತ್ತ ಮನೆಗೆ ಬಂದಿದ್ದರು.

ತೋಟದಲ್ಲಿ ಪಂಪ್‌ಸೆಟ್ ಎತ್ತುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದಿದ್ದು, ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



