Breaking
7 Sep 2026, Mon

ಅಣ್ಣನ ಕೈಯಲ್ಲಿ ತಮ್ಮನ ಕೊಲೆ: ಆರೋಪಿ ಸೋಮನಾಥ ನ್ಯಾಯಾಂಗ ಬಂಧನಕ್ಕೆ

ಸುರತ್ಕಲ್: ಕೃಷ್ಣಾಪುರದಲ್ಲಿ ನಡೆದ ತಮ್ಮನ ಕೊಲೆ ಪ್ರಕರಣದ ಆರೋಪಿ ಸೋಮನಾಥನನ್ನು ಜು.21ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.


ಮೃತ ಮಲ್ಲಿಕಾರ್ಜುನ ಅವರ ಮರಣೋತ್ತರ ಪರೀಕ್ಷೆ ಪೂರ್ಣಗೊಂಡ ಬಳಿಕ ಅವರ ಪಾರ್ಥಿವ ಶರೀರವನ್ನು ಹುಟ್ಟೂರಾದ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಗ್ಯಾಳ ಗ್ರಾಮಕ್ಕೆ ಕೊಂಡೊಯ್ಯಲಾಗಿದೆ.


ಪ್ರಾಥಮಿಕ ತನಿಖೆಯ ಪ್ರಕಾರ, ಮಲ್ಲಿಕಾರ್ಜುನ ತಮ್ಮ ಜಾತಿಗಿಂತ ಕೆಳವರ್ಗದ ಯುವತಿಯನ್ನು ಪ್ರೀತಿಸುತ್ತಿದ್ದರು. ಈ ಸಂಬಂಧವನ್ನು ಬಿಡುವಂತೆ ಅಣ್ಣ ಸೋಮನಾಥ ಸಲಹೆ ನೀಡಿದ್ದಾನೆ ಎನ್ನಲಾಗಿದೆ. ಇದಕ್ಕೆ ಮಲ್ಲಿಕಾರ್ಜುನ, “ನೀನೂ ಹಿಂದೆ ಇದೇ ರೀತಿಯ ಸಂಬಂಧ ಹೊಂದಿದ್ದೆ, ಈಗ ನನಗೆ ಯಾಕೆ ಹೇಳುತ್ತೀಯ?” ಎಂದು ಪ್ರಶ್ನಿಸಿದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ಜಗಳವೇ ಬಳಿಕ ಕೊಲೆಯಲ್ಲಿ ಅಂತ್ಯಗೊಂಡಿದೆ ಎಂದು ಪೊಲೀಸರು ಶಂಕಿಸಿದ್ದಾರೆ.


ಮಲ್ಲಿಕಾರ್ಜುನ, ಸೋಮನಾಥ ಮತ್ತು ಬಸವರಾಜ ಮೂವರು ಸಹೋದರರು. ತಮ್ಮ ಹುಟ್ಟೂರಿನಲ್ಲಿ ಮನೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದರೆಂದು ತಿಳಿದುಬಂದಿದೆ. ಬಸವರಾಜ ಗ್ರಾಮದಲ್ಲೇ ಉಳಿದು ವ್ಯವಹಾರ ನೋಡಿಕೊಳ್ಳುತ್ತಿದ್ದು, ಮಲ್ಲಿಕಾರ್ಜುನ, ಸೋಮನಾಥ ಹಾಗೂ ಅವರ ತಾಯಿ ಕೃಷ್ಣಾಪುರದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.


ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *