ಮಂಗಳೂರು: ಸ್ನೇಹಿತನ ಮಾತು ನಂಬಿ ಬ್ಯಾಂಕ್ ಖಾತೆ ತೆರೆದು ದಾಖಲೆಗಳನ್ನು ನೀಡಿದ್ದ ಯುವಕನ ಖಾತೆಯನ್ನು ಸೈಬರ್ ವಂಚನೆಗೆ ಬಳಸಿದ ಆರೋಪದಡಿ ಸುರತ್ಕಲ್ ಕೃಷ್ಣಾಪುರ 7ನೇ ಬ್ಲಾಕ್ ನಿವಾಸಿ ಮೊಹಮ್ಮದ್ ಹಮ್ರಾಜ್ ವಿರುದ್ಧ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರರ ಪ್ರಕಾರ, 2022ರಲ್ಲಿ ಬಲ್ಮಠದಲ್ಲಿ ಐಟಿಐ ಕಲಿಯುತ್ತಿದಾಗ ಸ್ನೇಹಿತನೊಬ್ಬ ಸಿಕ್ಕಿದರು. 2023ರ ಅಕ್ಟೋಬರ್‌ನಲ್ಲಿ ವಿದೇಶದಿಂದ ಹಣ ಬರಲಿರುವುದಾಗಿ ಹೇಳಿ ಮೊಹಮ್ಮದ್ ಹಮ್ರಾಜ್ ಬ್ಯಾಂಕ್ ಖಾತೆ ತೆರೆಯುವಂತೆ ಮನವೊಲಿಸಿದ್ದ. ಅದರಂತೆ ಕೆವೈಸಿ ದಾಖಲೆಗಳನ್ನು ನೀಡಿ ಖಾತೆ ತೆರೆದು, ಪಾಸ್‌ಬುಕ್, ಚೆಕ್‌ಬುಕ್, ಎಟಿಎಂ ಕಾರ್ಡ್ ಹಾಗೂ ಸಿಮ್‌ಕಾರ್ಡ್‌ನ್ನು ಹಮ್ರಾಜ್‌ಗೆ ನೀಡಿದ್ದು, ಪ್ರತಿಯಾಗಿ ₹2,000 ಪಡೆದಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ಬ್ಯಾಂಕ್ ಖಾತೆಯ ಮೂಲಕ ಸೈಬರ್ ವಂಚನೆ ಹಣ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದೆ. ವಿವಿಧ ರಾಜ್ಯಗಳ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಖಾತೆಯನ್ನು ಫ್ರೀಜ್ ಮಾಡಲಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಬ್ಯಾಂಕ್ ಖಾತೆಯನ್ನು ಸೈಬರ್ ವಂಚನೆಗೆ ದುರ್ಬಳಕೆ ಮಾಡಿದ ಮೊಹಮ್ಮದ್ ಹಮ್ರಾಜ್ ಹಾಗೂ ಈ ಕೃತ್ಯದಲ್ಲಿ ಭಾಗಿಯಾಗಿರುವ ಇತರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಯುವಕ ದೂರು ನೀಡಿದ್ದು, ಮಂಗಳೂರು ಸೆನ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.



