Breaking
22 Jul 2026, Wed

ಮಂಗಳೂರಿನಲ್ಲಿ 24 ಗಂಟೆಯೊಳಗೆ ಚಿನ್ನಾಭರಣ ಕಳವು ಆರೋಪಿ ಬಂಧನ; ₹6.37 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಮಂಗಳೂರು: ನಗರದ ಮೇರಿಹಿಲ್ ಬಾಂದೋಟ್ಟು ಪ್ರದೇಶದ ಮನೆಯೊಂದರಲ್ಲಿ ನವೀಕರಣ ಕಾಮಗಾರಿ ವೇಳೆ ಸುಮಾರು ₹6.37 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ವಾಚ್ ಕಳವು ಮಾಡಿದ್ದ ಆರೋಪಿಯನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಕೃತ್ಯ ನಡೆದ 24 ಗಂಟೆಯೊಳಗೆ ಬಂಧಿಸಿದ್ದಾರೆ.


ಬಂಧಿತ ಆರೋಪಿಯನ್ನು ಉತ್ತರ ಪ್ರದೇಶ ಮೂಲದ, ಸದ್ಯ ಮಂಗಳೂರಿನ ಬಂದರ್ನ ಅಜಿಜುದ್ದೀನ್ ರಸ್ತೆಯಲ್ಲಿ ವಾಸವಿರುವ ಜಹೀರುದ್ದೀನ್ (24) ಎಂದು ಗುರುತಿಸಲಾಗಿದೆ.


ಮನೆಯ ಹಿಂಭಾಗದ ಕೊಠಡಿಯ ಮೇಲ್ಛಾವಣಿ ಬದಲಾವಣೆ ಹಾಗೂ ಹಾಲ್ನ ಫಾಲ್ಸ್ ಸೀಲಿಂಗ್ ಕಾಮಗಾರಿಯ ವೇಳೆ, ಕೋಣೆಯಲ್ಲಿದ್ದ ಟೇಬಲ್ನೊಳಗಿನ ಸಣ್ಣ ಪರ್ಸ್ನಲ್ಲಿ ಇರಿಸಿದ್ದ 20 ಗ್ರಾಂ ತೂಕದ ಚಿನ್ನದ ಕಡಗ, 17 ಗ್ರಾಂ ತೂಕದ ಚಿನ್ನದ ಚೈನ್, 8 ಗ್ರಾಂ ಮತ್ತು 4 ಗ್ರಾಂ ತೂಕದ ಚಿನ್ನದ ಉಂಗುರಗಳು ಹಾಗೂ ಸೊನಾಟಾ ಕಂಪನಿಯ ಗೋಲ್ಡ್-ಕೋಟೆಡ್ ವಾಚ್ ಸೇರಿ ಒಟ್ಟು 49 ಗ್ರಾಂ ತೂಕದ, ಸುಮಾರು ₹6.37 ಲಕ್ಷ ಮೌಲ್ಯದ ಚಿನ್ನಾಭರಣ ಕಳವಾಗಿತ್ತು.


ಈ ಕುರಿತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 305ರಡಿ ಪ್ರಕರಣ ದಾಖಲಾಗಿತ್ತು.


ಪ್ರಕರಣದ ತನಿಖೆ ನಡೆಸಿದ ಪೊಲೀಸರು ಕಾಮಗಾರಿಗೆ ಬಂದಿದ್ದ ಕಾರ್ಮಿಕರನ್ನು ವಿಚಾರಣೆ ನಡೆಸಿದ ವೇಳೆ, ಜಹೀರುದ್ದೀನ್ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಆರೋಪಿಯಿಂದ ಕಳವಾಗಿದ್ದ ಎಲ್ಲಾ ಚಿನ್ನಾಭರಣ ಹಾಗೂ ವಾಚ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.


ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Leave a Reply

Your email address will not be published. Required fields are marked *