ವಿಟ್ಲ: ಸೂರಿಕುಮೇರ್ ಪೆಟ್ರೋಲ್ ಬಂಕ್ ಸಮೀಪ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಉರುಳಿದ ವೇಳೆ, ವಿಟ್ಲ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರಾಮಕೃಷ್ಣ ಹಾಗೂ ಸಿಬ್ಬಂದಿ ಕರಣಾಕರ ಸಮಯೋಚಿತ ಕಾರ್ಯಾಚರಣೆ ನಡೆಸಿ ಒಂದು ಪುಟ್ಟ ಮಗು ಸೇರಿದಂತೆ ಮೂವರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಅಪಘಾತದ ಬಳಿಕ ವಾಹನದೊಳಗೆ ಮಗು, ಮಹಿಳೆ ಹಾಗೂ ಚಾಲಕ ಸಿಲುಕಿಕೊಂಡಿದ್ದರು. ಈ ವೇಳೆ ಸ್ಥಳಕ್ಕಾಗಮಿಸಿದ ಎಸ್ಐ ರಾಮಕೃಷ್ಣ ಅವರು ಧೈರ್ಯ ಮತ್ತು ಸಮಯಪ್ರಜ್ಞೆ ಪ್ರದರ್ಶಿಸಿ, ಅಳುತ್ತಿದ್ದ ಪುಟ್ಟ ಮಗುವನ್ನು ತಮ್ಮ ಕೈಯಲ್ಲಿ ಎತ್ತಿಕೊಂಡು ಸುರಕ್ಷಿತ ಸ್ಥಳಕ್ಕೆ ಕರೆತಂದರು. ಬಳಿಕ ಸಿಬ್ಬಂದಿಯ ಸಹಾಯದಿಂದ ಉಳಿದವರನ್ನೂ ವಾಹನದಿಂದ ಹೊರತೆಗೆದು ರಕ್ಷಿಸಲಾಯಿತು.

ತಕ್ಷಣದ ರಕ್ಷಣಾ ಕಾರ್ಯಾಚರಣೆಯಿಂದ ಮೂವರು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಈ ಮಾನವೀಯ ರಕ್ಷಣಾ ಕಾರ್ಯಾಚರಣೆಯ ದೃಶ್ಯ ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ವೀಕ್ಷಿಸಿದ ಸಾರ್ವಜನಿಕರು “ಇಂತಹ ಅಧಿಕಾರಿಗಳೇ ಪೊಲೀಸ್ ಇಲಾಖೆಯ ಹೆಮ್ಮೆ”, “ಕರ್ತವ್ಯಕ್ಕಿಂತ ಮಾನವೀಯತೆಯನ್ನು ಮೊದಲಿಗಾಗಿಟ್ಟ ಅಧಿಕಾರಿ”, “ಸಮಯೋಚಿತ ಕಾರ್ಯದಿಂದ ಅಮೂಲ್ಯ ಜೀವಗಳನ್ನು ಉಳಿಸಿದ ನಿಜವಾದ ಜನಸೇವಕ” ಎಂದು ವ್ಯಾಪಕವಾಗಿ ಪ್ರಶಂಸಿಸುತ್ತಿದ್ದಾರೆ.

ಎಸ್ಐ ರಾಮಕೃಷ್ಣ ಹಾಗೂ ಸಿಬ್ಬಂದಿ ಕರಣಾಕರ ಅವರ ಕರ್ತವ್ಯನಿಷ್ಠೆ, ಮಾನವೀಯತೆ ಮತ್ತು ಕ್ಷಿಪ್ರ ಕಾರ್ಯಾಚರಣೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.


