ವಿಟ್ಲ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಫೆ.6 ಮತ್ತು 7 ರಂದು ನಡೆಯಲಿರುವ ಬೆಳ್ಳಿ ವರ್ಷದ ತುಳುನಾಡ ಜಾತ್ರೆ ಶ್ರೀ ಒಡಿಯೂರು ರಥೋತ್ಸವದ ಅಂಗವಾಗಿ ಪೂರ್ವಭಾವಿ ಸಮಾಲೋಚನಾ ಸಭೆ ಮಂಗಳವಾರ ನಡೆಯಿತು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪೂಜ್ಯ ಶ್ರೀ ಗುರುದೇವಾನಂದ ಸ್ವಾಮಿಗಳು ಆಶೀರ್ವಚನ ನೀಡಿ ದೀನರ ಸೇವೆಗೆ ಭಗವಂತನ ಅನುಗ್ರಹವಿದೆ. ಸಂತ ಸಮಾಜಮುಖಿಯಾದಾಗ ಸಮಾಜ ಬೆಳಗುತ್ತದೆ. ಅಧ್ಯಾತ್ಮವಿದ್ದಲ್ಲಿ ದ್ವೇಷ ಭಾವವಿರದು. ಭಾವನೆ, ರಾಗ, ತಾಳ ಮಿಶ್ರಣದ ಸಂಗೀತ, ಸಾಹಿತ್ಯ ಹೂರಣವನ್ನೊಳಗೊಂಡು ಭಾರತವಾಗಿದೆ. ಪ್ರಕೃತಿಯೊಳಗಿನ ಶಕ್ತಿಯನ್ನು ಬಳಸುವ ತಿಳುವಳಿಕೆ ನಮ್ಮಲ್ಲಿರಬೇಕು.ತುಳು ಸಾಹಿತ್ಯ ಸಮ್ಮೇಳನ, ರಥೋತ್ಸವ ಎರಡು ದಿನಗಳ ಕಾರ್ಯಕ್ರಮ ಯಶಸ್ವಿಯಾಗಿಸುವಲ್ಲಿ ಪ್ರತಿಯೊಬ್ಬರೂ ನಮ್ಮ ಎಂಬ ಭಾವನೆಯಿಂದ ಭಾಗವಹಿಸಬೇಕು.12 ಕಿ.ಮೀ ತನಕ ಸಾಗುವ ಒಡಿಯೂರು ಶ್ರೀ ರಥ ಯಾತ್ರೆ ವೈಶಿಷ್ಟ್ಯ ಪೂರ್ಣವಾಗಿ ನಡೆಯಲಿ ಎಂದು ತಿಳಿಸಿದರು.
ಶ್ರೀ ಸಂಸ್ಥಾನಂನ ಸಾಧ್ವಿ ಶ್ರೀ ಮಾತಾನಂದಮಯಿ ದಿವ್ಯ ಉಪಸ್ಥಿತರಿದ್ದರು.ಒಡಿಯೂರು ಶ್ರೀ ವಿವಿಧೋದ್ದೇಶ ಸಹಕಾರಿ ನಿಯಮಿತದ ಅಧ್ಯಕ್ಷ ಎ.ಸುರೇಶ್ ರೈ, ತುಳು ಸಾಹಿತ್ಯ ಸಮ್ಮೇಳನ ಸಂಚಾಲಕರಾದ ಡಾ.ವಸಂತ ಕುಮಾರ್ ಪೆರ್ಲ, ಕದ್ರಿ ನವನೀತ ಶೆಟ್ಟಿ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ, ಸ್ವಾಗತ ಸಮಿತಿಯ ಸಂಚಾಲಕ ಲಿಂಗಪ್ಪ ಗೌಡ ಪನೆಯಡ್ಕ, ನಿರ್ದೇಶಕ ಲೋಕನಾಥ್ ಶೆಟ್ಟಿ, ನಮ್ಮ ಕುಡ್ಲ ವಾಹಿನಿಯ ಲೀಲಾಕ್ಷ ಕರ್ಕೇರ, ಸುಧಾಕರ ಪೂಂಜಾ ಭಾಗವಹಿಸಿದ್ದರು.
ರಥೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಯಶವಂತ ವಿಟ್ಲ ಸ್ವಾಗತಿಸಿದರು. ಸಂತೋಷ್ ಭಂಡಾರಿ ವಂದಿಸಿದರು. ಮಾತೇಶ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಸಂಚಾಲಕರು, ಪದಾಧಿಕಾರಿಗಳು, ಸದಸ್ಯರು, ಶ್ರೀ ಕ್ಷೇತ್ರದ ಭಕ್ತರು ಉಪಸ್ಥಿತರಿದ್ದರು.

