ಬೆಂಗಳೂರು: ರಾಜಾಜಿನಗರದ ರಾಮಮಂದಿರ ರಸ್ತೆಯಲ್ಲಿ ನಡೆದ ದುರಂತ ಘಟನೆಯಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ 52 ವರ್ಷದ ಸತೀಶ್ ಅವರ ತಲೆಯ ಮೇಲೆ ರಸ್ತೆಬದಿಯ ಮರದ ಒಣಕೊಂಬೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬುಧವಾರ ಸಂಜೆ ಸುಮಾರು 5 ಗಂಟೆ ವೇಳೆಗೆ ಫೈನಾನ್ಸ್ ಕಲೆಕ್ಷನ್ ಕೆಲಸದ ನಿಮಿತ್ತ ತೆರಳುತ್ತಿದ್ದ ವೇಳೆ ಬಲವಾದ ಗಾಳಿಯಿಂದ ಮರದ ಒಣಕೊಂಬೆ ಮುರಿದು ಅವರ ಮೇಲೆ ಬಿದ್ದಿದೆ. ಪರಿಣಾಮ ಅವರು ರಸ್ತೆ ಮೇಲೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ.

ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ಯಶವಂತಪುರದ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ವೈದ್ಯರು ತಲೆಗೆ ಶಸ್ತ್ರಚಿಕಿತ್ಸೆ ನಡೆಸಿದ್ದು, ಸದ್ಯ ಅವರು ಕೋಮಾ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಘಟನೆ ಬಳಿಕ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರದೇಶದಲ್ಲಿರುವ ಒಣಗಿದ ಮರದ ಕೊಂಬೆಗಳ ಕುರಿತು ಹಲವು ಬಾರಿ ಸಂಬಂಧಪಟ್ಟ ಅರಣ್ಯ ಇಲಾಖೆ ಹಾಗೂ ಅಧಿಕಾರಿಗಳಿಗೆ ದೂರು ನೀಡಿದ್ದರೂ ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯವೇ ಈ ದುರ್ಘಟನೆಗೆ ಕಾರಣ ಎಂದು ನಿವಾಸಿಗಳು ಹೇಳುತ್ತಿದ್ದಾರೆ.

ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.


