ಕೊಪ್ಪಳ: ಜಿಲ್ಲೆಯ ಕುಕನೂರು ತಾಲ್ಲೂಕಿನ ಭಾನಾಪುರ ಸಮೀಪ ರಾಷ್ಟ್ರೀಯ ಹೆದ್ದಾರಿ–63ರಲ್ಲಿ ಶನಿವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.

ಮೃತರನ್ನು ಕೆಂಚಮ್ಮ ಬಾಳೆಕಾಯಿ (35), ಅಮೃತಾ ಕೋಟ್ಯಾಳ್ (25), ರಮೇಶ್ ಬಳ್ಳಾರಿ (45) ಹಾಗೂ ಪ್ರವೀಣ್ (23) ಎಂದು ಗುರುತಿಸಲಾಗಿದೆ.
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕಬ್ಬಾರ್ ಗ್ರಾಮದ ನಿವಾಸಿಗಳು ಓಮ್ನಿ ವಾಹನದಲ್ಲಿ ಮಂತ್ರಾಲಯಕ್ಕೆ ತೀರ್ಥಯಾತ್ರೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಈ ಸಂದರ್ಭ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಅಶೋಕ್ ಲೇಲ್ಯಾಂಡ್ ಗೂಡ್ಸ್ ವಾಹನ ಡಿವೈಡರ್ ದಾಟಿ ಬಂದು ಓಮ್ನಿ ವಾಹನಕ್ಕೆ ನೇರವಾಗಿ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

ಡಿಕ್ಕಿಯ ತೀವ್ರತೆಗೆ ಓಮ್ನಿ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತ ಸಂಬಂಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


