ಧಾರವಾಡ: ರಸ್ತೆ ಬದಿ ನಿಂತಿದ್ದ ಟಿಪ್ಪರ್ಗೆ ಹಿಂಬದಿಯಿಂದ ಬಂದ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ತಾಲೂಕಿನ ತೇಗೂರು ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ (ಜೂ.26) ನಡೆದಿದೆ.

ಮೃತರನ್ನು ಹಳೇತೇಗೂರಿನ ಷಣ್ಮುಖ ಜೋಗಿ (45) ಹಾಗೂ ಉತ್ತರ ಪ್ರದೇಶ ಮೂಲದ ಕ್ಯಾಂಟರ್ ಚಾಲಕ ಸಾಗರ ಸರೋಜ್ ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ಷಣ್ಮುಖ ಜೋಗಿ ಅವರು ಟಿಪ್ಪರ್ ವಾಹನದ ಟೈರ್ ಸ್ಫೋಟಗೊಂಡ ಹಿನ್ನೆಲೆಯಲ್ಲಿ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಜಾಕ್ ಹಾಕಿ ಟೈರ್ ಬದಲಾಯಿಸುತ್ತಿದ್ದರು. ಈ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಕ್ಯಾಂಟರ್ ಟಿಪ್ಪರ್ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ತೀವ್ರತೆಗೆ ಟೈರ್ ಬದಲಾಯಿಸುತ್ತಿದ್ದ ಷಣ್ಮುಖ ಜೋಗಿ ಸ್ಥಳದಲ್ಲೇ ಮೃತಪಟ್ಟರೆ, ಕ್ಯಾಂಟರ್ ಚಾಲಕ ಸಾಗರ ಸರೋಜ್ ಕೂಡ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಘಟನಾ ಸ್ಥಳಕ್ಕೆ ಗರಗ ಠಾಣೆಯ ಪಿಎಸ್ಐ ಪ್ರವೀಣ ಗಂಗೋಳ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


