ನವದೆಹಲಿ: ವಿದೇಶ ಪ್ರವಾಸ, ವಿದ್ಯಾಭ್ಯಾಸ ಹಾಗೂ ಉದ್ಯೋಗಕ್ಕಾಗಿ ಪಾಸ್ಪೋರ್ಟ್ ಮಾಡಿಸಿಕೊಳ್ಳುವವರಿಗೆ ಕೇಂದ್ರ ಸರ್ಕಾರದಿಂದ ದೊಡ್ಡ ಶಾಕ್ ಎದುರಾಗಿದೆ. ಜುಲೈ 1, 2026ರಿಂದ ದೇಶಾದ್ಯಂತ ಪಾಸ್ಪೋರ್ಟ್ ಶುಲ್ಕವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ.

ಕೇಂದ್ರ ಸರ್ಕಾರವು 1980ರ ಪಾಸ್ಪೋರ್ಟ್ ನಿಯಮಗಳಿಗೆ ತಿದ್ದುಪಡಿ ತಂದು ಹೊಸ ಶುಲ್ಕ ಪಟ್ಟಿಯನ್ನು ಪ್ರಕಟಿಸಿದೆ. ವಿದೇಶಾಂಗ ಸಚಿವಾಲಯದ ಆದೇಶದಂತೆ ಪರಿಷ್ಕತ ದರಗಳು ಜುಲೈ 1ರಿಂದ ಜಾರಿಗೆ ಬರಲಿವೆ.

ಹೊಸ ನಿಯಮದ ಪ್ರಕಾರ, 18 ವರ್ಷ ಮೇಲ್ಪಟ್ಟವರು ಮತ್ತು 15ರಿಂದ 18 ವರ್ಷದೊಳಗಿನವರು 36 ಪುಟಗಳ ಪಾಸ್ಪೋರ್ಟ್ಗೆ ಸಾಮಾನ್ಯ ಸೇವೆಯಲ್ಲಿ ₹2,500 ಪಾವತಿಸಬೇಕು. ತತ್ಕಾಲ್ ಸೇವೆಗೆ ಶುಲ್ಕ ₹5,000 ಆಗಿದೆ.
60 ಪುಟಗಳ ಪಾಸ್ಪೋರ್ಟ್ ಬೇಕಾದರೆ ಸಾಮಾನ್ಯ ಸೇವೆಗೆ ₹3,500 ಮತ್ತು ತತ್ಕಾಲ್ ಸೇವೆಗೆ ₹5,000 ಪಾವತಿಸಬೇಕಾಗುತ್ತದೆ.

ಪ್ರಸ್ತುತ 36 ಪುಟಗಳ ಪಾಸ್ಪೋರ್ಟ್ಗೆ ಸಾಮಾನ್ಯ ಶುಲ್ಕ ₹1,500 ಇದ್ದು, ತತ್ಕಾಲ್ ಹೆಚ್ಚುವರಿ ಶುಲ್ಕ ₹2,000 ಇದೆ. 60 ಪುಟಗಳ ಪಾಸ್ಪೋರ್ಟ್ಗೆ ಸಾಮಾನ್ಯ ಶುಲ್ಕ ₹2,000 ಆಗಿದೆ. ಹೊಸ ಪರಿಷ್ಕರಣೆಯೊಂದಿಗೆ ಸಾಮಾನ್ಯ ವಿಭಾಗದಲ್ಲಿ ₹1,000ರಿಂದ ₹1,500ವರೆಗೆ ಹಾಗೂ ತತ್ಕಾಲ್ ವಿಭಾಗದಲ್ಲಿ ₹1,000ರಿಂದ ₹2,000ವರೆಗೆ ಹೆಚ್ಚಳವಾಗಿದೆ.

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ರಾಪ್ತರಿಗೆ 5 ವರ್ಷ ಅಥವಾ 18 ವರ್ಷ ತುಂಬುವವರೆಗೆ ಮಾನ್ಯತೆ ಇರುವ 36 ಪುಟಗಳ ಪಾಸ್ಪೋರ್ಟ್ಗೆ ಶುಲ್ಕ ₹1,000 ಆಗಿದೆ. ತತ್ಕಾಲ್ ಸೇವೆಗೆ ₹2,000 ಪಾವತಿಸಬೇಕು.
ಕಳೆದುಹೋದ, ಹಾನಿಗೊಳಗಾದ ಅಥವಾ ಕಳುವಾದ ಪಾಸ್ಪೋರ್ಟ್ ಮರುಪಡೆಯಲು 36 ಪುಟಗಳಿಗೆ ₹3,000 ಹಾಗೂ 60 ಪುಟಗಳಿಗೆ ₹3,500 ಶುಲ್ಕ ವಿಧಿಸಲಾಗಿದೆ.

ಇದಲ್ಲದೆ, ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರ (PCC) ಪಡೆಯಲು ₹500 ಶುಲ್ಕ ನಿಗದಿಪಡಿಸಲಾಗಿದೆ. ECR ಅಳಿಸುವಿಕೆ ಅಥವಾ ವೈಯಕ್ತಿಕ ವಿವರ ಬದಲಾವಣೆಗೂ ₹1,000ರಿಂದ ₹2,000ವರೆಗೆ ಶುಲ್ಕ ವಿಧಿಸಲಾಗುತ್ತದೆ.
ಈ ಹೊಸ ಶುಲ್ಕ ಪರಿಷ್ಕರಣೆ ವಿದೇಶ ಪ್ರಯಾಣ, ವಿದ್ಯಾಭ್ಯಾಸ ಮತ್ತು ಉದ್ಯೋಗ ಯೋಜನೆ ಹೊಂದಿರುವವರ ಖರ್ಚಿನ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.


