ಬಂಟ್ವಾಳ: ರಾತ್ರಿ ಗಸ್ತು ಕರ್ತವ್ಯದ ವೇಳೆ ಗೂಡಿನಬಲಿ ನಿವಾಸಿ ಅಶ್ರಫ್ ಅವರಿಗೆ ಎದೆ ನೋವು ಹಾಗೂ ಹೊಟ್ಟೆ ನೋವು ಕಾಣಿಸಿಕೊಂಡ ಸಂದರ್ಭದಲ್ಲಿ ಮನೆಯೊಳಗಿಂದ ಜೋರಾಗಿ ಬಾಗಿಲು ಬಡಿಯುವ ಹಾಗೂ ಸಹಾಯಕ್ಕಾಗಿ ಕೂಗುವ ಶಬ್ದ ಕೇಳಿಬಂದಿದೆ. ತಕ್ಷಣ ಸ್ಪಂದಿಸಿದ ಬಂಟ್ವಾಳ ನಗರ ಠಾಣೆಯ ನೈಟ್ ಬೀಟ್ ಸಿಬ್ಬಂದಿ ಪಿಸಿ ವಿನೋದ್ ಹಾಗೂ ಗೃಹ ರಕ್ಷಕ ಸಿಬ್ಬಂದಿ ಜಯಗಣೇಶ್ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಪರಿಶೀಲಿಸಿದರು.

ಅಶ್ರಫ್ ಅವರಿಗೆ ಲಘು ಹೃದಯಾಘಾತದ ಲಕ್ಷಣಗಳು ಕಂಡುಬಂದ ಹಿನ್ನೆಲೆ ಸಿಬ್ಬಂದಿಗಳು ಸಮಯೋಚಿತವಾಗಿ ಪ್ರಥಮ ಚಿಕಿತ್ಸೆ ಹಾಗೂ ಸಿಪಿಆರ್ ನೀಡಿ ತುರ್ತಾಗಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದರು.

ಕರ್ತವ್ಯದ ವೇಳೆ ತೋರಿದ ಈ ಮಾನವೀಯ ಸೇವೆ ಹಾಗೂ ತ್ವರಿತ ಕಾರ್ಯಾಚರಣೆಯನ್ನು ಗುರುತಿಸಿ, ಬಂಟ್ವಾಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಶ್ರೀ ಯಶ್ ಕುಮಾರ್ ಶರ್ಮಾ, ಐಪಿಎಸ್ ಅವರು ಗೃಹ ರಕ್ಷಕ ಸಿಬ್ಬಂದಿ ಜಯಗಣೇಶ್ ಅವರನ್ನು ಗೌರವ ಸ್ಮರಣಿಕೆ ನೀಡಿ ಅಭಿನಂದಿಸಿದರು.

ಕರ್ತವ್ಯ ಮತ್ತು ಮಾನವೀಯತೆ ಒಂದಾಗಿದಾಗ ಜೀವ ಉಳಿಸುವ ಸೇವೆ ಸಾಧ್ಯ ಎಂಬುದಕ್ಕೆ ಈ ಘಟನೆ ಮಾದರಿಯಾಗಿದೆ.


