Breaking
26 Jun 2026, Fri

ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ತ್ಯಾಜ್ಯ ರಾಶಿ, ನೇತ್ರಾವತಿ ನದಿ ಮಾಲಿನ್ಯಕ್ಕೆ ಖಡಕ್ ಎಚ್ಚರಿಕೆ: ಅಧಿಕಾರಿಗಳಿಗೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ತೀವ್ರ ತರಾಟೆ

ಬಿಸಿರೋಡು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಹೆಚ್ಚುತ್ತಿರುವ ತ್ಯಾಜ್ಯ ರಾಶಿ ಮತ್ತು ನೇತ್ರಾವತಿ ನದಿ ಮಾಲಿನ್ಯದ ಬಗ್ಗೆ ಶಾಸಕರಾದ ರಾಜೇಶ್ ನಾಯ್ಕ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಸಾರ್ವಜನಿಕರಿಂದ ನಿರಂತರ ದೂರುಗಳು ಬರುತ್ತಿದ್ದರೂ ಸಮಸ್ಯೆ ಬಗೆಹರಿಯದ ಹಿನ್ನೆಲೆ, ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕರು ತ್ಯಾಜ್ಯ ತೆರವು ಕಾರ್ಯವನ್ನು ತಕ್ಷಣ ಕೈಗೊಳ್ಳುವಂತೆ ಸೂಚಿಸಿದರು. ಪಾಣೆಮಂಗಳೂರು ಸೇರಿದಂತೆ ಹೆದ್ದಾರಿ ಬದಿಯಲ್ಲಿ ಕಸ ರಾಶಿಯಾಗಿರುವುದು ಸಾರ್ವಜನಿಕ ಆರೋಗ್ಯ ಹಾಗೂ ಪರಿಸರಕ್ಕೆ ಗಂಭೀರ ಹಾನಿ ಉಂಟುಮಾಡುತ್ತಿದೆ ಎಂದು ಹೇಳಿದರು.

ರಸ್ತೆ ಬದಿಯಲ್ಲಿ ಕಸ ಎಸೆಯುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಹಾಗೂ ತ್ಯಾಜ್ಯ ಎಸೆಯುವ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಸೂಚಿಸಿದರು. ಕ್ಯಾಮೆರಾ ಅಳವಡಿಕೆ ವೆಚ್ಚವನ್ನು ಶಾಸಕರ ಅನುದಾನದಿಂದಲೇ ಭರಿಸಲಾಗುವುದು ಎಂದರು.

ಇದೇ ವೇಳೆ ನೇತ್ರಾವತಿ ನದಿ ಗೆ ಸಂಸ್ಕರಣೆ ಇಲ್ಲದ ಕೊಳಚೆ ನೀರು ಸೇರುತ್ತಿರುವ ವಿಚಾರವನ್ನು ಗಂಭೀರವಾಗಿ ಪ್ರಸ್ತಾಪಿಸಿದ ಅವರು, ಬಂಟ್ವಾಳ, ಬಡ್ಡಕಟ್ಟೆ, ಗೂಡಿನಬಳಿ ಹಾಗೂ ತಲಪಾಡಿ ಭಾಗಗಳ ವಾಣಿಜ್ಯ ಸಂಕೀರ್ಣಗಳು, ಹೋಟೆಲ್ ಗಳು ಮತ್ತು ವಸತಿ ಸಮುಚ್ಚಯಗಳಿಂದ ಹೊರಬರುವ ಕೊಳಚೆ ನೀರು ನದಿಗೆ ಸೇರುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.

“ನೇತ್ರಾವತಿ ನದಿ ಬಂಟ್ವಾಳದ ಜೀವನಾಡಿ ಮಾತ್ರವಲ್ಲ, ಮಂಗಳೂರು ಸೇರಿದಂತೆ ಸಾವಿರಾರು ಜನರ ಕುಡಿಯುವ ನೀರಿನ ಮೂಲವಾಗಿದೆ. ನದಿಯನ್ನು ಕಲುಷಿತಗೊಳಿಸುವವರ ವಿರುದ್ಧ ಯಾವುದೇ ರಾಜಿ ಇಲ್ಲ,” ಎಂದು ಶಾಸಕರು ಸ್ಪಷ್ಟಪಡಿಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ತ್ಯಾಜ್ಯ ಸಮಸ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿಯಮಿತ ಸ್ವಚ್ಛತಾ ಕಾರ್ಯ ನಡೆಸಿ, ಕಸ ಎಸೆಯುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

“ಸ್ವಚ್ಛ ಬಂಟ್ವಾಳ ನಮ್ಮೆಲ್ಲರ ಜವಾಬ್ದಾರಿ. ಸಾರ್ವಜನಿಕರೂ ಸ್ವಚ್ಛತೆ ಬಗ್ಗೆ ಜಾಗೃತಿ ಬೆಳೆಸಬೇಕು,” ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಕರೆ ನೀಡಿದರು.

Leave a Reply

Your email address will not be published. Required fields are marked *