Breaking
11 Aug 2026, Tue

ವಿಟ್ಲ: ಕಾರಿನಲ್ಲಿ ಗಾಂಜಾ ಸೇವನೆ ಆರೋಪ; ನಾಲ್ವರ ವಿರುದ್ಧ ಪ್ರಕರಣ

ವಿಟ್ಲ: ಕಾರಿನಲ್ಲಿ ಗಾಂಜಾ ತಂದು ಸೇವಿಸಿದ ಆರೋಪದ ಹಿನ್ನೆಲೆಯಲ್ಲಿ ನಾಲ್ವರ ವಿರುದ್ಧ ವಿಟ್ಲ ಪೊಲೀಸರು ಮಾದಕ ದ್ರವ್ಯಗಳು ಮತ್ತು ಮನೋವಿಕೃತ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.


ಆಗಸ್ಟ್ 9ರಂದು ಸಂಜೆ ವಿಟ್ಲ ಕಸಬಾ ಗ್ರಾಮದ ಕಾನತ್ತಡ್ಕದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಕಾರೊಂದು ನಿಂತಿರುವ ಬಗ್ಗೆ ವಿಟ್ಲ ಪೊಲೀಸ್ ಸಬ್ಇನ್ಸ್ಪೆಕ್ಟರ್ ರಾಮಕೃಷ್ಣ ಅವರಿಗೆ ಮಾಹಿತಿ ಲಭಿಸಿತ್ತು. ಮಾಹಿತಿ ಮೇರೆಗೆ ಪೊಲೀಸ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿದ ಅವರು, ನಾಗರಾಜ್ ಕೆ. (32) ಎಂಬವರ ಮನೆಯ ಅಂಗಳದಲ್ಲಿ ಕೆಎ-17-ಎನ್-7443 ನೋಂದಣಿ ಸಂಖ್ಯೆಯ ಕಾರನ್ನು ಪತ್ತೆಹಚ್ಚಿದ್ದಾರೆ.


ಈ ವೇಳೆ ಮನೆಯ ವರಾಂಡಾದಲ್ಲಿ ನಾಲ್ವರು ಪುರುಷರು ಕುಳಿತಿರುವುದು ಕಂಡುಬಂದಿದ್ದು, ವಿಚಾರಣೆ ನಡೆಸಿದಾಗ ಅವರು ಮನೆಯ ಮಾಲೀಕ ನಾಗರಾಜ್ ಕೆ., ಬಂಟ್ವಾಳ ಕೊಳ್ನಾಡಿನ ಕುಮಾರ್ ಕೃಷ್ಣ (27), ಬಂಟ್ವಾಳ ಕೇಪುವಿನ ಅಬ್ದುಲ್ ಜಲೀಲ್ (40) ಹಾಗೂ ವಿಟ್ಲ ಕಸಬಾದ ಅಬ್ದುಲ್ ಖಾದರ್ ಯು. (31) ಎಂದು ತಿಳಿದುಬಂದಿದೆ.


ವಿಚಾರಣೆ ವೇಳೆ ನಾಲ್ವರೂ ಕಾರಿನಲ್ಲಿ ಗಾಂಜಾ ತಂದು ಸೇವಿಸಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ನಾಲ್ವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದೆ ಎಂದು ವರದಿಯಾಗಿದೆ.


ಈ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 173/2026ರ ಅಡಿಯಲ್ಲಿ ಮಾದಕ ದ್ರವ್ಯಗಳು ಮತ್ತು ಮನೋವಿಕೃತ ವಸ್ತುಗಳ ಕಾಯ್ದೆ-1985ರ ಸೆಕ್ಷನ್ 27(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *