Breaking
10 Aug 2026, Mon

ವಿಟ್ಲ: ಗ್ಯಾಸ್ ಸಿಲಿಂಡರ್ ಸ್ಫೋಟ; ಗೃಹಿಣಿಯ ಸಮಯಪ್ರಜ್ಞೆಯಿಂದ ಮೂವರು ಪಾರು

ವಿಟ್ಲ: ಕಸಬಾ ಗ್ರಾಮದ ಕುರುಂಬಳದಲ್ಲಿ ಭಾನುವಾರ ಬೆಳಗ್ಗೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮನೆಯೊಂದು ಹಾನಿಗೊಳಗಾದ ಘಟನೆ ನಡೆದಿದೆ. ಗೃಹಿಣಿಯ ಸಮಯಪ್ರಜ್ಞೆಯಿಂದ 9 ವರ್ಷದ ಬಾಲಕ ಸೇರಿದಂತೆ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ಕುರುಂಬಳ ನಿವಾಸಿ ಹಮೀದ್ ಅವರ ಮನೆಯಲ್ಲಿ ಘಟನೆ ಸಂಭವಿಸಿದೆ. ಹಮೀದ್ ಪೇಟೆಗೆ ತೆರಳಿದ್ದ ಸಂದರ್ಭದಲ್ಲಿ ಅವರ ಪತ್ನಿ ಖೈರುನ್ನಿಸಾ ಅಡುಗೆ ಕೋಣೆಯಲ್ಲಿದ್ದರು. ಈ ವೇಳೆ ಗ್ಯಾಸ್ ಸಿಲಿಂಡರ್ನ ರೆಗ್ಯುಲೇಟರ್ ಬಳಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.


ಅಪಾಯದ ಪರಿಸ್ಥಿತಿಯನ್ನು ಅರಿತ ಖೈರುನ್ನಿಸಾ ಕೂಡಲೇ ಧೈರ್ಯದಿಂದ ಕಾರ್ಯಪ್ರವೃತ್ತರಾಗಿ ಮನೆಯಲ್ಲಿದ್ದ ತನ್ನ 9 ವರ್ಷದ ಪುತ್ರ ಇಮ್ರಾನ್ ಹಾಗೂ ವೃದ್ಧ ಅತ್ತೆ ಮರಿಯಮ್ಮ ಅವರನ್ನು ಮನೆಯಿಂದ ಹೊರಗೆ ಕರೆತಂದಿದ್ದಾರೆ.


ಈ ವೇಳೆ ಖೈರುನ್ನಿಸಾ ಅವರ ಕೂಗು ಕೇಳಿ ನೆರೆಯ ನಿವಾಸಿ ಉಮ್ಮರ್ ಸ್ಥಳಕ್ಕೆ ಧಾವಿಸಿ ನೆರವಾಗಿದ್ದಾರೆ. ಮೂವರು ಮನೆಯಿಂದ ಹೊರಬಂದ ಕೆಲವೇ ಕ್ಷಣಗಳಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಮನೆಯ ಬಹುತೇಕ ಭಾಗ ಹಾನಿಗೊಳಗಾಗಿದೆ.


ಘಟನೆಯ ಮಾಹಿತಿ ತಿಳಿದು ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೃಹಿಣಿಯ ಸಮಯಪ್ರಜ್ಞೆಯಿಂದಾಗಿ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.

Leave a Reply

Your email address will not be published. Required fields are marked *