ಬೆಂಗಳೂರು: ಕೌಟುಂಬಿಕ ಕಲಹ ಹಾಗೂ ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ತಂದೆ, ತಾಯಿ ಮತ್ತು ಸಹೋದರಿಯನ್ನು ಹತ್ಯೆ ಮಾಡಿದ ಆರೋಪದಲ್ಲಿ ಬಂಧಿತಳಾಗಿರುವ ಶ್ವೇತಾಳನ್ನು ಹೆಚ್ಚಿನ ವಿಚಾರಣೆಗಾಗಿ ಕೆ.ಆರ್.ಪುರ ಠಾಣೆ ಪೊಲೀಸರು 14 ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆದಿದ್ದಾರೆ.

ಜೂನ್ 22ರ ರಾತ್ರಿ ತಂದೆ ಸೋಮಸುಂದರ್, ತಾಯಿ ಲಕ್ಷ್ಮೀ ಹಾಗೂ ಸಹೋದರಿ ಸುಪ್ರೀಯಾಳನ್ನು ಪ್ರಿಯಕರ ಕೆನತ್ ಜೊತೆ ಸೇರಿ ಹತ್ಯೆಗೈದು ಪುದುಚೇರಿಗೆ ಪರಾರಿಯಾಗಿದ್ದ ಆರೋಪದ ಮೇಲೆ ಶ್ವೇತಾಳನ್ನು ಜೂನ್ 24ರಂದು ಬಂಧಿಸಿ ಬೆಂಗಳೂರಿಗೆ ಕರೆತರಲಾಗಿತ್ತು. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚುವರಿ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಪ್ರಾಥಮಿಕ ವಿಚಾರಣೆಯಲ್ಲಿ ಶ್ವೇತಾ, ಕುಟುಂಬದವರೊಂದಿಗೆ ಉಂಟಾಗಿದ್ದ ಭಿನ್ನಾಭಿಪ್ರಾಯ ಮತ್ತು ಹಣಕಾಸು ಸಂಬಂಧಿತ ಕಾರಣಗಳಿಂದಲೇ ಕೃತ್ಯ ಎಸಗಿರುವುದಾಗಿ ಹೇಳಿದ್ದಾಳೆ. ಇದೇ ವೇಳೆ ಪ್ರಿಯಕರ ಕೆನತ್ಗೆ ಪ್ರಕರಣದೊಂದಿಗೆ ಯಾವುದೇ ಸಂಬಂಧ ಇಲ್ಲ ಎಂದು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವಿಚಾರಣೆ ವೇಳೆ, ತಾಯಿ ತನ್ನ ಸ್ವತಂತ್ರ ಜೀವನಕ್ಕೆ ಅವಕಾಶ ನೀಡುತ್ತಿರಲಿಲ್ಲ, ಕೆಲಸ ಹಾಗೂ ವೈಯಕ್ತಿಕ ನಿರ್ಧಾರಗಳ ಮೇಲೂ ನಿರ್ಬಂಧ ಹಾಕುತ್ತಿದ್ದರು ಮತ್ತು ತನ್ನ ಪ್ರೀತಿಯನ್ನು ಕುಟುಂಬ ವಿರೋಧಿಸಿತ್ತು ಎಂದು ಶ್ವೇತಾ ಹೇಳಿರುವುದಾಗಿ ಮಾಹಿತಿ ಲಭ್ಯವಾಗಿದೆ.

ಇನ್ನೊಂದೆಡೆ, ಕೃತ್ಯದಲ್ಲಿ ಪ್ರಿಯಕರನ ಪಾತ್ರ ಇದೆಯೇ ಎಂಬುದನ್ನು ಪರಿಶೀಲಿಸಲು ಪೊಲೀಸರು ಶ್ವೇತಾಳ ಮೊಬೈಲ್ ಜಪ್ತಿ ಮಾಡಿಕೊಂಡಿದ್ದು, ತಾಂತ್ರಿಕ ಹಾಗೂ ಡಿಜಿಟಲ್ ಸಾಕ್ಷ್ಯ ಸಂಗ್ರಹಕ್ಕಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ತನಿಖೆ ಮುಂದುವರಿದಿದೆ.


