ಇಂದಬೆಟ್ಟು: ನವಭಾರತ್ ಗೆಳೆಯರ ಬಳಗ (ರಿ) ಕಲ್ಲಾಜೆ, ಇಂದಬೆಟ್ಟು ಇದರ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವನಾರಿ, ಇಂದಬೆಟ್ಟುವಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ದೀಪ ಬೆಳಗಿಸಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಯುವಜನರ ಭವಿಷ್ಯ ರೂಪಿಸುವ ಉದ್ದೇಶದಿಂದ ನವಭಾರತ್ ಗೆಳೆಯರ ಬಳಗ ಹಮ್ಮಿಕೊಂಡಿರುವ ಈ ಜನೋಪಯೋಗಿ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ತಮ್ಮ ಬ್ಯುಸಿ ವೇಳಾಪಟ್ಟಿಯ ನಡುವೆಯೂ ಬೆಂಗಳೂರಿನಿಂದ ನೇರವಾಗಿ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕರು, ಆಯೋಜಕರನ್ನು ಅಭಿನಂದಿಸಿ ಕಾರ್ಯಕ್ರಮಕ್ಕೆ ಆರ್ಥಿಕ ಸಹಕಾರವನ್ನೂ ನೀಡಿದರು. ಕಾರ್ಯಾಗಾರದಲ್ಲಿ ಭಾಗವಹಿಸಿದ ಎಲ್ಲ ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಾಗಾರದಲ್ಲಿ ಬೆಳ್ತಂಗಡಿ ಸಂಚಾರಿ ಪೊಲೀಸ್ ಉಪ ನಿರೀಕ್ಷಕ ಕಿಶೋರ್, ಸಿಬ್ಬಂದಿ ಉಮಾಪತಿ, ಬೆಳ್ತಂಗಡಿ ಪೊಲೀಸ್ ಠಾಣೆಯ ಎ.ಎಸ್.ಐ. ನಾರಾಯಣ ಹಾಗೂ ಬೀಟ್ ಪೊಲೀಸ್ ಸಂತೋಷ್ ಅವರು ತಮ್ಮ ವೃತ್ತಿ ಅನುಭವಗಳನ್ನು ಹಂಚಿಕೊಂಡು ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯ ಕುರಿತು ಮಾಹಿತಿ ನೀಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಮುಡಾಯಿಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಕಿಶೋರ್ ಕುಮಾರ್ ಎಚ್.ಕೆ. ಕಾರ್ಯಾಗಾರವನ್ನು ನಡೆಸಿಕೊಟ್ಟರು.

ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಉಂಬೆಜೆ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಅರುಣ್ ಕುಮಾರ್ ಕೆಳಗಿನ ಕಲ್ಲಾಜೆ, ಕಾರ್ಯದರ್ಶಿ ನಾಗೇಶ್ ಆಚಾರ್ಯ ಮುಂಡ್ರಬೆಟ್ಟು, ಉಪಾಧ್ಯಕ್ಷ ರಾಜೇಶ್ ಹೆಬ್ಬಾರಪಲ್ಕೆ, ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ವಿನೋದ್ ಪ್ರಸಾದ್ ಕಲ್ಲಾಜೆ ಕಾರ್ಯಕ್ರಮ ನಿರೂಪಿಸಿದರು.

ಬೆಳ್ತಂಗಡಿ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಪರೀಕ್ಷಾಕಾಂಕ್ಷಿ ಯುವಕ-ಯುವತಿಯರು ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು. ಮುಂದಿನ ದಿನಗಳಲ್ಲಿ ಪರೀಕ್ಷಾರ್ಥಿಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಕೆ, ದೈಹಿಕ ಪರೀಕ್ಷೆ ಸೇರಿದಂತೆ ವಿವಿಧ ಹಂತಗಳಲ್ಲಿ ನವಭಾರತ್ ಗೆಳೆಯರ ಬಳಗ (ರಿ) ಕಲ್ಲಾಜೆ, ಇಂದಬೆಟ್ಟು ವತಿಯಿಂದ ಸಹಕಾರ ನೀಡಲಾಗುವುದು ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು.


