ಮೈಸೂರು: 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಮೈಸೂರಿನ ಹೂಟಗಳ್ಳಿಯ ಓವೆಲ್ ಪಾರ್ಕ್ (ಮೂಡ್ ಪಾರ್ಕ್) ನಲ್ಲಿ ಅತ್ಯಂತ ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ಸುಮಾರು 2,000ಕ್ಕೂ ಅಧಿಕ ಯೋಗಾಸಕ್ತರು ಯೋಗಾಸನ ಹಾಗೂ ಧ್ಯಾನದಲ್ಲಿ ಭಾಗವಹಿಸಿ ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ಅರಿತು ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಂಗವಾಗಿ ಮೈಸೂರಿನ ಹೆಸರಾಂತ ನಾರಾಯಣ ಹೃದಯಾಲಯ, ಕ್ಲಿಯರ್ ಮೆಡಿ, ರೇಡಿಯಂಟ್, ಅನ್ನಪೂರ್ಣ ಕಣ್ಣಿನ ಆಸ್ಪತ್ರೆ ಹಾಗೂ ಸಿಪ್ಲಾ ಆಯುಷ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಮೆಗಾ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಆರೋಗ್ಯ ಶಿಬಿರದಲ್ಲಿ ಸುಮಾರು 600 ಮಂದಿ ಭಾಗವಹಿಸಿ ಉಚಿತ ವೈದ್ಯಕೀಯ ಸೇವೆಗಳ ಪ್ರಯೋಜನ ಪಡೆದುಕೊಂಡರು.

ಕಾರ್ಯಕ್ರಮವನ್ನು ಯೋಗ ನರಸಿಂಹ ಸ್ವಾಮಿ ದೇವಸ್ಥಾನದ ಕಾರ್ಯದರ್ಶಿಗಳಾದ ಡಾ. ಪ್ರೊ. ಶ್ರೀನಿವಾಸ್ ಅವರು ಉದ್ಘಾಟಿಸಿ, ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಮಹತ್ವ ಹಾಗೂ ಯೋಗದ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಅಗತ್ಯತೆಯ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ಇಂಡಸ್ಟ್ರಿಯಲ್ ಅಂಡ್ ಕಾಮರ್ಸ್ ಅಧ್ಯಕ್ಷ ಲಿಂಗರಾಜ್ ಅವರು ಉಪಸ್ಥಿತರಿದ್ದರು.

ನಂತರ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಅಲಯನ್ಸ್ ಕ್ಲಬ್ ರಾಜ್ಯಪಾಲ ಮಹಾಬಲೇಶ್ವರ ಭೈರಿ, ಅಂತರರಾಷ್ಟ್ರೀಯ ಅಲಯನ್ಸ್ ಕ್ಲಬ್ ಕಾರ್ಯದರ್ಶಿ ಡಾ. ನಾಗರಾಜ್ ಹಾಗೂ ಅಂತರರಾಷ್ಟ್ರೀಯ ಸಮಿತಿ ಅಧ್ಯಕ್ಷ ಸಿರಿಬಾಲು ಅವರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಸಿರಿ ವಿದ್ಯಾಲಯ ಶಾಲೆಯ ಅಧ್ಯಕ್ಷೆ ಶೋಭಾ ಸಿರಿಬಾಲು (ಅಲಯನ್ಸ್ ಅಂತರರಾಷ್ಟ್ರೀಯ ಸಂಸ್ಥೆಯ ರಾಯಭಾರಿ), ಸುದರ್ಶನ ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಸುರೇಶ್, ರೋಟರಿ ಮಿಡ್‌ಟೌನ್ ಶಾಲೆಯ ಪ್ರಾಂಶುಪಾಲ ಅನಂತರಾಮ್, ವಿದ್ಯಾ ಕಾನ್ವೆಂಟ್ ಶಾಲೆಯ ಶ್ರೀದೇವಿ, ಅಲಯನ್ಸ್ ಪ್ರಾಂತೀಯ ಅಧ್ಯಕ್ಷ ಮಹದೇವ್ ಡಿ., ಜಿಲ್ಲಾಧ್ಯಕ್ಷ ಡಾ. ರಾಜು ಹಾಗೂ ಮೈಸೂರು ಜಿಲ್ಲಾ ಯೋಗ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಯೋಗಕುಮಾರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಯೋಗ ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸಿರುವ ಹಿರಿಯ ಯೋಗ ಪಟುಗಳಾದ ಮಣಿಕಂಠ ಹಾಗೂ ಲಂಕೇಶ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಎಲ್ಲಾ ಸಂಸ್ಥೆಗಳ ಶಿಕ್ಷಕ ವೃಂದ, ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿ ಯಶಸ್ಸಿಗೆ ಕೈಜೋಡಿಸಿದರು. ಯೋಗದ ಮಹತ್ವವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಈ ಕಾರ್ಯಕ್ರಮ ಮಹತ್ವದ ಪಾತ್ರ ವಹಿಸಿತು ಎಂದು ಸಂಘಟಕರು ತಿಳಿಸಿದ್ದಾರೆ.


