Breaking
23 Sep 2026, Wed

ಅಡಿಕೆ, ಕರಿಮೆಣಸು ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆ ವಿಮೆ ನೋಂದಣಿ ಆರಂಭ – ಪ್ರಭಾಕರ ಪ್ರಭು

ಬಂಟ್ವಾಳ: ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಸುತ್ತಿರುವ ರೈತರಿಗೆ ಹವಾಮಾನ ವೈಪರೀತ್ಯದಿಂದ ಉಂಟಾಗುವ ಬೆಳೆ ನಷ್ಟಕ್ಕೆ ಪರಿಹಾರ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಜಾರಿಯಲ್ಲಿರುವ ಮಹತ್ವಾಕಾಂಕ್ಷಿ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯನ್ನು 2026-27ನೇ ಸಾಲಿನ ಮುಂಗಾರು ಹಾಗೂ ಹಿಂಗಾರು ಹಂಗಾಮಿಗೆ ತೋಟಗಾರಿಕೆ ಇಲಾಖೆ ಜಾರಿಗೊಳಿಸಿದೆ.

ಪ್ರಸ್ತುತ ಅಡಿಕೆ ಹಾಗೂ ಕರಿಮೆಣಸು ಬೆಳೆಗಳಿಗೆ ವಿಮೆ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಬೆಳೆಸಾಲ ಪಡೆದಿರುವ ರೈತರು ತಾವು ಸಾಲ ಪಡೆದಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಸಂಪರ್ಕಿಸಿ ನೋಂದಣಿ ಮಾಡಿಸಿಕೊಳ್ಳಬಹುದು ಹಾಗೂ ವಿಮಾ ಕಂತು ಪಾವತಿಸಬಹುದು. ಬೆಳೆಸಾಲ ಪಡೆಯದ ರೈತರೂ ಸಹ ನಿಗದಿತ ಪ್ರೀಮಿಯಂ ಪಾವತಿಸುವ ಮೂಲಕ ಯೋಜನೆಯ ಸೌಲಭ್ಯವನ್ನು ಪಡೆಯಬಹುದಾಗಿದೆ.

ಯೋಜನೆಯ ಪ್ರಯೋಜನ ಪಡೆಯಲು ರೈತರು ತಮ್ಮ ಬೆಳೆಗಳ ಬೆಳೆ ಸಮೀಕ್ಷೆ ಮಾಡಿಸಿರಬೇಕು ಹಾಗೂ ಫಾರ್ಮರ್ ಐಡಿ ಹೊಂದಿರಬೇಕು. ಅಡಿಕೆ ಬೆಳೆಗೆ ಎಕರೆಗೆ ರೂ. 2,591/- ಹಾಗೂ ಕರಿಮೆಣಸು ಬೆಳೆಗೆ ಎಕರೆಗೆ ರೂ. 951/- ವಿಮಾ ಕಂತು ನಿಗದಿಪಡಿಸಲಾಗಿದೆ.

ಬೆಳೆ ವಿಮೆ ನೋಂದಣಿಗೆ ಜುಲೈ 31, 2026 ಕೊನೆಯ ದಿನಾಂಕವಾಗಿದೆ. ಆದ್ದರಿಂದ ಬೆಳೆಸಾಲ ಪಡೆದಿರುವ ಹಾಗೂ ಇತರ ಆಸಕ್ತ ರೈತರು ತಮ್ಮ ಜಮೀನಿನ ಆರ್‌ಟಿಸಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಹಾಗೂ ನಾಮಿನಿಯ ಆಧಾರ್ ಕಾರ್ಡ್ ದಾಖಲೆಗಳೊಂದಿಗೆ ನಿಗದಿತ ಅವಧಿಯೊಳಗೆ ತಮ್ಮ ವ್ಯಾಪ್ತಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯನ್ನು ಸಂಪರ್ಕಿಸಿ ಯೋಜನೆಯ ಸದುಪಯೋಗ ಪಡೆಯಬೇಕೆಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಪ್ರಭಾಕರ ಪ್ರಭು ಅವರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *