ವಿಟ್ಲ: ಪಾವೂರು,ಹರೇಕಳ, ಕೊಣಾಜೆ, ಪಜೀರು, ಬೋಳಿಯಾರು ಗ್ರಾಮಗಳ ಸಂಯೋಜಿತ ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘ ಗ್ರಾಮ ಚಾವಡಿ ಇಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಪುನರ್ ಪ್ರತಿಷ್ಠೆ ಮಹಾ ಕುಂಭಾಭಿಷೇಕ ಹಾಗೂ ಸಂಘದ 44 ನೇ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ಶ್ರೀ ಮಾತೆ ದೇಸಾಯಿ ಬೈದೆತಿ ಚಾವಡಿಯಲ್ಲಿ ಧಾರ್ಮಿಕ ಸಭೆ ನಡೆಯಿತು.
ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಕನ್ಯಾನ ಕಣಿಯೂರು ಶ್ರೀ ಮಹಾಬಲೇಶ್ವರ ಸ್ವಾಮೀಜಿ ಉತ್ತಮರಾಗಿ ಬದುಕು ನಡೆಸಿದವರು, ಸತ್ತ ನಂತರವೂ ಬದುಕುತ್ತಾರೆ. ಅಂತಹ ಜೀವನದಲ್ಲಿ ಸಾರ್ಥಕತೆ ಇದೆ. ಬ್ರಹ್ಮ ಶ್ರೀ ನಾರಾಯಣಗುರು ಸಾರಿದ ತತ್ವ ಬದುಕಿನಲ್ಲಿ ನಿಜ ಅರ್ಥದಲ್ಲಿ ಅನುಷ್ಠಾನವಾಗಬೇಕು. ನಾವು ಪ್ರತಿಯೊಬ್ಬರನ್ನು ಪ್ರೀತಿಸಿದಾಗ ಇತರರು ನಮ್ಮ ಕಾರ್ಯಗಳಿಗೆ ಸಹಕರಿಸುತ್ತಾರೆ. ಮಕ್ಕಳಿಗೆ ಸಂಸ್ಕಾರ ಕಲಿಸಿ, ಉತ್ತಮರನ್ನಾಗಿ ಬೆಳೆಸಬೇಕು. ಪಂಚಗ್ರಾಮಗಳ ಬಂಧುಗಳ ಸಹಕಾರದಿಂದ ಈ ಮಹಾಕಾರ್ಯ ನಡೆದಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅಮ್ಮೆಂಬಳ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಟಿ.ಜಿ.ರಾಜಾರಾಮ ಭಟ್ ಮಾತನಾಡಿ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಅನ್ಯೋನ್ಯವಾಗಿ ಸಮಾಜದಲ್ಲಿ ಬದುಕಿದಾಗ ಬ್ರಹ್ಮ ಶ್ರೀ ನಾರಾಯಣಗುರುವರ್ಯರ ಸಂದೇಶ ಅರ್ಥಪೂರ್ಣವೆನಿಸುತ್ತದೆ. ಗುರುಗಳ ಪ್ರತಿಯೊಂದು ಸಂದೇಶಗಳು ಅಂತ:ಕರಣ ಶುದ್ಧಿಯಾಗಿದೆ. ಪ್ರಸ್ತುತ ಸಮಾಜದಲ್ಲಿ ಸಂಸ್ಕಾರ ಕೊರತೆಯಿದೆ. ತಾಯಂದಿರು ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ. ನಿಷ್ಕಲ್ಮಶ ಮನಸ್ಸಿನ ಜನರ ಸಂಘಟನೆ ಸಮಾಜಮುಖಿಯಾಗಿರುವುದರೊಂದಿಗೆ ದೀರ್ಘಕಾಲ ಉಳಿಯುತ್ತದೆ ಎಂದರು.


ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ತಾಲೂಕು ಬಿಲ್ಲವರ ಸಂಘದ ಅಧ್ಯಕ್ಷ ಜಿತೇಂದ್ರ ಜೆ.ಸುವರ್ಣ ವಹಿಸಿದ್ದರು. ಬಂಟ್ವಾಳ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಗುರುಕೃಪಾ ಬಿ.ಸಿ.ರೋಡು ಉದ್ಘಾಟಿಸಿದ್ದರು.
ಅತಿಥಿಗಳಾಗಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ದ.ಕ.ಮೂರ್ತೆದಾರ ಮಹಾಮಂಡಲದ ಅಧ್ಯಕ್ಷ ಸಂಜೀವ ಪೂಜಾರಿ ಬಿರ್ವ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ, ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಜಗದೀಶ ಆಳ್ವ ಕುವೆತ್ತಬೈಲು, ಮುಡಿದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಂಜವ, ಮಂಗಳೂರು ಕೇಂದ್ರ ಯುವವಾಹಿನಿ ಘಟಕದ ಅಧ್ಯಕ್ಷ ಹರೀಶ್ ಕೆ.ಪೂಜಾರಿ, ಬಂಟ್ವಾಳ ಪಿ.ಡಬ್ಲ್ಯೂ ಡಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಶೈಲೇಶ್ ಕುಚ್ಚಿಗುಡ್ಡೆ,ಕೋಟಿ ಚೆನ್ನಯ ಮೂಲಸ್ಥಾನ ಗೆಜ್ಜೆಗಿರಿ ಕ್ಷೇತ್ರದ ಅಧ್ಯಕ್ಷ ರವಿ ಚಿಲಿಂಬಿ, ಉದ್ಯಮಿಗಳಾದ ರಾಧಾಕೃಷ್ಣ ರೈ ಉಳಿಯ, ವಿಜೇಶ್ ನಾಯ್ಕ್ ನಾರ್ಯ ನುಡಿಮುತ್ತು, ಅಸೈಗೋಳಿ ಗುಳಿಗ- ಕೊರಗಜ್ಜ ಜೀರ್ಣೋದ್ಧಾರ ಸೇವಾ ಸಮಿತಿ ಅಧ್ಯಕ್ಷ ರವಿ ರೈ ಪಜೀರು, ಮುಡಿಪು ಕುರ್ನಾಡು ಲಯನ್ಸ್ ಕ್ಲಬ್ ಅಧ್ಯಕ್ಷ ಶಿವರಾಮ ರೈ ಮೇರಾವು, ಪಂಚಲೋಹ ವಿಗ್ರಹ ಪ್ರತಿಷ್ಠಾಪನಾ ಸಮಿತಿ ಉಳ್ಳಾಲ ವಲಯ ಅಧ್ಯಕ್ಷ ಯಶವಂತ ಡಿ.ದೇರಾಜೆಗುತ್ತು, ಕಾರ್ಯಾಧ್ಯಕ್ಷ ದೇವಕಿ ಆರ್.ಉಳ್ಳಾಲ್ ಉಪಸ್ಥಿತರಿದ್ದರು.
ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ರವೀಂದ್ರ ಬಂಗೇರ ಕೊಣಾಜೆ ಸ್ವಾಗತಿಸಿದರು. ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಮೊದಲು ಭವ್ಯ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಿತು.



