ಕಾರ್ಕಳ: ಬೆಕ್ಕನ್ನು ರಕ್ಷಿಸಲು ಯತ್ನಿಸಿದ ವೇಳೆ ಬಾವಿಗೆ ಬಿದ್ದ ಅರ್ಚಕರೊಬ್ಬರನ್ನು ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿ ಸಮಯೋಚಿತ ಕಾರ್ಯಾಚರಣೆಯ ಮೂಲಕ ರಕ್ಷಿಸಿದ ಘಟನೆ ಸೋಮವಾರ ಬೆಳಗ್ಗೆ ಕಾರ್ಕಳದ ಪುಕ್ಕೇರಿ ಬೈಪಾಸ್ ಪ್ರದೇಶದಲ್ಲಿ ನಡೆದಿದೆ.

ರಕ್ಷಿಸಲ್ಪಟ್ಟವರು ನಾರಾಯಣ ಭಟ್ಟ (48) ಎಂದು ಗುರುತಿಸಲಾಗಿದೆ. ಬೆಳಗ್ಗೆ ಸುಮಾರು 7:15ರ ವೇಳೆಗೆ ಬೆಕ್ಕನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾಗ ಅವರು ಆಕಸ್ಮಿಕವಾಗಿ ಬಾವಿಯೊಳಗೆ ಬಿದ್ದಿದ್ದು, ಅಲ್ಲೇ ಸಿಲುಕಿಕೊಂಡಿದ್ದರು.
ಘಟನೆಯ ಮಾಹಿತಿ ದೊರಕುತ್ತಿದ್ದಂತೆ ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಠಾಣಾಧಿಕಾರಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪ್ರಮುಖ ಅಗ್ನಿಶಾಮಕ ದಳದ ಸಿಬ್ಬಂದಿ ರೂಪೇಶ್ ಬಾವಿಯೊಳಗೆ ಇಳಿದು ನಾರಾಯಣ ಭಟ್ಟ ಅವರನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ ರಕ್ಷಿಸಿದರು.

ಈ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿಗಳಾದ ದಿನೇಶ್, ಭೀಮಪ್ಪ, ಗಣೇಶ್, ಸುರೇಶ್ ಹಾಗೂ ಚಾಲಕ ಮುಜಾಮೀರ್ ಸಹಕರಿಸಿದರು.
ಸ್ಥಳೀಯರು ಅಗ್ನಿಶಾಮಕ ದಳದ ತ್ವರಿತ ಸ್ಪಂದನೆ ಮತ್ತು ಧೈರ್ಯಶಾಲಿ ಕಾರ್ಯಾಚರಣೆಯನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


