Breaking
19 Sep 2026, Sat

11 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆಯತ್ನ ಪ್ರಕರಣದ ಆರೋಪಿ ಸಿಸಿಬಿ ಬಲೆಗೆ

ಮಂಗಳೂರು: ಸುಮಾರು 11 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆಯತ್ನ ಪ್ರಕರಣದ ಪ್ರಮುಖ ಆರೋಪಿಯನ್ನು ಮಂಗಳೂರು ನಗರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕರ್ನೇಳ್ಳಿ ಗ್ರಾಮದ ನಿವಾಸಿ ಚುಂಕಿ ಆಕಾಶಭವನ ಅಲಿಯಾಸ್ ಸಂತೋಷ್ ಎಸ್. (34) ಎಂದು ಗುರುತಿಸಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, 2015ರಲ್ಲಿ ಕಾವೂರು ಪೊಲೀಸ್ ಠಾಣೆ ವ್ಯಾಪ್ತಿಯ ಆಕಾಶಭವನದಲ್ಲಿ ನಡೆದ ಮದುವೆ ಮದರಂಗಿ ಕಾರ್ಯಕ್ರಮದ ವೇಳೆ ಅಶೋಕ ಕುಮಾರ ಕೊಟ್ಟಾರಿ ಹಾಗೂ ಜಗ್ಗು ನಡುವೆ ಮಾತಿನ ಚಕಮಕಿ ನಡೆದಿತ್ತು. ಬಳಿಕ ಸಂತೋಷ್ ಸೇರಿದಂತೆ ರಂಜಿತ್, ಧನು, ಧೂಮ, ಸ್ವೀಟಿ ಅಲಿಯಾಸ್ ನರೇಶ್ ಹಾಗೂ ಜಗ್ಗು ಸೇರಿ ಅಶೋಕ ಕುಮಾರ ಕೊಟ್ಟಾರಿ ಅವರ ಮೇಲೆ ತಲವಾರಿನಿಂದ ಹಲ್ಲೆ ನಡೆಸಿ ಕೊಲೆಯತ್ನ ಎಸಗಿದ್ದರು ಎನ್ನಲಾಗಿದೆ.

ಈ ಘಟನೆಗೆ ಸಂಬಂಧಿಸಿ ಕಾವೂರು ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 ಸೇರಿದಂತೆ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗಿದ ಬಳಿಕ ಸಂತೋಷ್ ತಲೆಮರೆಸಿಕೊಂಡಿದ್ದು, ಹಲವು ವರ್ಷಗಳಿಂದ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ನಂತರ ನ್ಯಾಯಾಲಯವು ಆತನ ವಿರುದ್ಧ ಎಲ್‌ಪಿಸಿ (LPC) ವಾರಂಟ್ ಜಾರಿಗೊಳಿಸಿತ್ತು.

ಆರೋಪಿಯ ಚಲನವಲನದ ಬಗ್ಗೆ ನಿರಂತರ ಮಾಹಿತಿ ಸಂಗ್ರಹಿಸುತ್ತಿದ್ದ ಮಂಗಳೂರು ಸಿಸಿಬಿ ತಂಡಕ್ಕೆ ಆತ ಶಿವಮೊಗ್ಗ ಭಾಗದಲ್ಲಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಜುಲೈ 29ರಂದು ಹಾವೇರಿ ಜಿಲ್ಲೆಯ ಚಿಕ್ಕೆರೂರಿನಲ್ಲಿ ಆರೋಪಿಯನ್ನು ವಶಕ್ಕೆ ಪಡೆದು, ಮುಂದಿನ ಕಾನೂನು ಕ್ರಮಕ್ಕಾಗಿ ಕಾವೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.

ಬಂಧನ ಕಾರ್ಯಾಚರಣೆಯಲ್ಲಿ ಮಂಗಳೂರು ಸಿಸಿಬಿ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *