Breaking
1 Aug 2026, Sat

ಮೂರು ದಿನಗಳ ಬಳಿಕ ಅಡಿಕೆ ತೋಟದ ಚರಂಡಿಯಲ್ಲಿ ಜೀವಂತವಾಗಿ ಪತ್ತೆಯಾದ ವೃದ್ಧ

ವಿಟ್ಲ: ಮೂರು ದಿನಗಳಿಂದ ನಾಪತ್ತೆಯಾಗಿದ್ದ 75 ವರ್ಷದ ವೃದ್ಧರೊಬ್ಬರು ಕೊನೆಗೂ ಅಡಿಕೆ ತೋಟದೊಳಗಿನ ನೀರಿನ ಚರಂಡಿಯಲ್ಲಿ ಜೀವಂತವಾಗಿ ಪತ್ತೆಯಾಗಿರುವ ಘಟನೆ ವಿಟ್ಲ ಪಡ್ನೂರು ಗ್ರಾಮದ ಕುಕ್ಕಿಲ ಪ್ರದೇಶದಲ್ಲಿ ನಡೆದಿದೆ. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಬಳಿಕ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.


ಕುಕ್ಕಿಲ ನಿವಾಸಿ ಗಿರಿಯಪ್ಪ ಸಪಲ್ಯ ಅವರು ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಕುಟುಂಬ ಸದಸ್ಯರು ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ಪೊಲೀಸರು ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ವಿವಿಧ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಿದ್ದರು. ಸಮೀಪದ ಕೆರೆ, ಹೊಳೆ ಸೇರಿದಂತೆ ಹಲವು ಸ್ಥಳಗಳಲ್ಲಿ ಹುಡುಕಾಟ ನಡೆಸಿದರೂ ಅವರ ಬಗ್ಗೆ ಯಾವುದೇ ಮಾಹಿತಿ ದೊರಕಿರಲಿಲ್ಲ.


ಶುಕ್ರವಾರ ಬೆಳಿಗ್ಗೆ ಕುಟುಂಬಸ್ಥರು, ಕೊಡಪದವು ಮಾರುತಿ ಫ್ರೆಂಡ್ಸ್ ತಂಡ ಹಾಗೂ ಗ್ರಾಮಸ್ಥರು ಮತ್ತೊಮ್ಮೆ ಶೋಧ ಕಾರ್ಯ ಆರಂಭಿಸಿದರು. ಈ ವೇಳೆ ಕುಕ್ಕಿಲದ ಅಡಿಕೆ ತೋಟದೊಳಗೆ ಹರಿಯುವ ನೀರಿನ ಚರಂಡಿಯಲ್ಲಿ ಗಿರಿಯಪ್ಪ ಅವರು ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿರುವುದನ್ನು ಗಮನಿಸಿದರು.


ತಕ್ಷಣ ಅವರನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದ ಸ್ಥಳೀಯರು ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ವಿಟ್ಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ವೈದ್ಯರ ತುರ್ತು ಚಿಕಿತ್ಸೆಯಿಂದ ಅವರು ಅಪಾಯದಿಂದ ಪಾರಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.


ಈ ಯಶಸ್ವಿ ರಕ್ಷಣಾ ಕಾರ್ಯಾಚರಣೆಯಲ್ಲಿ ಕೊಡಪದವು ಮಾರುತಿ ಫ್ರೆಂಡ್ಸ್ ತಂಡದ ಮನೋಹರ್ ನೇತೃತ್ವ ವಹಿಸಿದ್ದರು. ಜಿಲ್ಲಾ ಬಿಜೆಪಿ ವಕ್ತಾರ ಮಾಧವ ಮಾವೆ, ಮಣಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅರವಿಂದ ರೈ, ರೈತ ಮೋರ್ಚಾ ಅಧ್ಯಕ್ಷ ಉಮೇಶ್ ಶೆಟ್ಟಿ, ಸ್ವಯಂಸೇವಕರಾದ ಸೀತಾರಾಮ ಗೌಡ, ಮುರಳಿ ಭಟ್, ಮನೋಹರ್ ಕುಕ್ಕಿಲ ಸೇರಿದಂತೆ ಹಲವಾರು ಸ್ಥಳೀಯರು ಶೋಧ ಹಾಗೂ ರಕ್ಷಣಾ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.

Leave a Reply

Your email address will not be published. Required fields are marked *