ನಾರಾವಿಯ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ಸೂರ್ಯನಾರಾಯಣ ಭಜನಾ ಮಂಡಳಿಯ ವತಿಯಿಂದ ಕ್ರೀಡೋತ್ಸವ, ಸಾಧಕ ಭಜಕರಿಗೆ ಗೌರವಾರ್ಪಣೆ ಹಾಗೂ ಭಜನೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆ ಯಶಸ್ವಿಯಾಗಿ ನಡೆಯಿತು.

ಸಭೆಯಲ್ಲಿ ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿಗಳಾದ ಸಂತೋಷ್ ಪಿ. ಅಳಿಯೂರು ಮಾತನಾಡಿ, ಭಜನೆಯ ಮೂಲಕ ಸಮಾಜದಲ್ಲಿ ಒಗ್ಗಟ್ಟು ವೃದ್ಧಿಯಾಗಬೇಕು. ಪ್ರತಿಯೊಬ್ಬರೂ ದೇವಸ್ಥಾನಗಳಲ್ಲಿ ಭಜನಾ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ನಿರಂತರವಾಗಿ ಭಜನಾ ಸೇವೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.

ಸಭೆಯಲ್ಲಿ ವಲಯದ ಎಲ್ಲಾ ಭಜನಾ ಮಂಡಳಿಗಳು ನಿಯಮಿತ ಭಜನಾ ಸೇವೆ ನಡೆಸುವ ಕುರಿತು ಮಹತ್ವದ ತೀರ್ಮಾನ ಕೈಗೊಳ್ಳಲಾಯಿತು. ಇದೇ ತಿಂಗಳ 28ರಂದು ಭಜನಾ ಮಂಡಳಿಯ ಸದಸ್ಯರು, ಪೋಷಕರು ಹಾಗೂ ಸ್ಥಳೀಯರಿಗಾಗಿ ಕ್ರೀಡಾಕೂಟ ಆಯೋಜಿಸಲು ನಿರ್ಧರಿಸಲಾಯಿತು.

ಗುರುಗಳಾದ ಅಶೋಕ್ ನಾಯ್ಕ್ ಕಳಸಬೈಲು ಮಾತನಾಡಿ, ಮಕ್ಕಳಲ್ಲಿ ಭಜನಾ ತರಬೇತಿ, ಸಂಸ್ಕಾರ ಹಾಗೂ ಭಕ್ತಿ ಚಟುವಟಿಕೆಗಳ ಬೆಳವಣಿಗೆಗಾಗಿ ಪೋಷಕರು ಹೆಚ್ಚಿನ ಸಹಕಾರ ನೀಡುವಂತೆ ಮನವಿ ಮಾಡಿದರು.
ಸಭೆಯಲ್ಲಿ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಸುಜಯ, ಭಾಸ್ಕರ್ ಕುಲಾಲ್ ಕೋಟೆಬಾಗಿಲು, ಪ್ರಸಾಂತ್ ಎಡಪದವು, ರೀತಿಕಾ ಕಲ್ಲಮುಂಡ್ಕುರು, ಅಕ್ಷಿತಾ ಚಿಟ್ಟೆಮಾರ್, ಪೋಷಕರು, ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.


