ಪುಂಜಾಲಕಟ್ಟೆ: ಯಕ್ಷಧ್ರುವ ಪಟ್ಲ ಫೌಂಡೇಶನ್ ಪುಂಜಾಲಕಟ್ಟೆ ಘಟಕ ಹಾಗೂ ಶ್ರುತಿ ಆರ್ಟ್ಸ್ ಕಾವಳಕಟ್ಟೆ ಇವರ ಆಶ್ರಯದಲ್ಲಿ ಯಕ್ಷಗಾನ ಬಣ್ಣಗಾರಿಕೆ ತರಬೇತಿ ಶಿಬಿರವು ರವಿವಾರ ಪುಂಜಾಲಕಟ್ಟೆಯ ಶ್ರೀ ಮುರುಘೇಂದ್ರ ಮಿತ್ರ ಮಂಡಳಿಯ ಸಭಾಂಗಣದಲ್ಲಿ ಆರಂಭಗೊಂಡಿತು.

ಶಿಬಿರವನ್ನು ಘಟಕದ ಉಪಾಧ್ಯಕ್ಷರು ಹಾಗೂ ಹಿರಿಯ ಯಕ್ಷಗಾನ ಕಲಾವಿದರಾದ ದಿವಾಕರ ದಾಸ್ ಕಾವಳಕಟ್ಟೆ ಉದ್ಘಾಟಿಸಿ, ತರಬೇತಿಗಾರರಿಗೆ ಶುಭ ಹಾರೈಸಿದರು. ಘಟಕದ ಅಧ್ಯಕ್ಷ ಹರೀಂದ್ರ ಟಿ. ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಪುರುಷೋತ್ತಮ ಪೂಜಾರಿ ಬುಳೆಕ್ಕಿನಕೋಡಿ, ಸಂಚಾಲಕ ರಮೇಶ್ ಶೆಟ್ಟಿ ಮಜಲೋಡಿ, ಶ್ರೀ ಮುರುಘೇಂದ್ರ ಮಿತ್ರ ಮಂಡಳಿಯ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿಗಾರ್, ಮಹಿಳಾ ಘಟಕದ ಗೌರವಾಧ್ಯಕ್ಷೆ ಉಮಾ ಡಿ. ಗೌಡ, ಅಧ್ಯಕ್ಷೆ ಶಶಿಕಲಾ ಗೋಪಾಲ ಪೂಜಾರಿ, ಯಕ್ಷಗುರು ಸಾಯಿಸುಮಾ ನಾವಡ ಕಾರಿಂಜ, ಪದಾಧಿಕಾರಿಗಳಾದ ಶೋಭಾ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ವಿನೋದ್, ಸುರೇಶ್ ಶೆಟ್ಟಿ ಮಜಲೋಡಿ, ಅಜಿತ್ ಶೆಟ್ಟಿ ಕಾರಿಂಜ, ಪ್ರಧಾನ ಕಾರ್ಯದರ್ಶಿ ಸತೀಶ್ ಆಚಾರ್ಯ ಬೆರ್ಕಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಶಿಬಿರದಲ್ಲಿ ಯಕ್ಷಗಾನ ಕಲಾವಿದರಾದ ದಿವಾಕರ ದಾಸ್, ಪ್ರಭಾಕರ ಶೆಟ್ಟಿ ತೆಂಕಕಾರಂದೂರು, ಶಶಿಧರ ಬಾಚಕೆರೆ ಹಾಗೂ ಸಾಯಿಸುಮಾ ನಾವಡ ಅವರು ಬಣ್ಣಗಾರಿಕೆಯ ಕುರಿತು ಪ್ರಾಯೋಗಿಕ ತರಬೇತಿ ನೀಡಿದರು.
ವಿನಯಾ ಪ್ರಾರ್ಥನೆಗೈದರು. ರತ್ನದೇವ್ ಪುಂಜಾಲಕಟ್ಟೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಯಕ್ಷಗಾನ ಬಣ್ಣಗಾರಿಕೆಯ ಕೌಶಲ್ಯವನ್ನು ಹೊಸ ತಲೆಮಾರಿಗೆ ಪರಿಚಯಿಸುವ ಉದ್ದೇಶದಿಂದ ಆಯೋಜಿಸಲಾದ ಈ ಶಿಬಿರಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.


