ಸುಬ್ರಹ್ಮಣ್ಯ: ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನೆಯ ಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ರವಿವಾರ 50 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿದ್ದು, ಕ್ಷೇತ್ರದಲ್ಲಿ ಭಾರೀ ಜನಸಂದಣಿ ಕಂಡುಬಂದಿದೆ.

ಮಿಥುನ ಮಾಸ ಆರಂಭವಾಗಿರುವುದು ಹಾಗೂ ಮಳೆಯ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಂದ ಸಾವಿರಾರು ಭಕ್ತರು ಶನಿವಾರ ರಾತ್ರಿಯಿಂದಲೇ ಕ್ಷೇತ್ರಕ್ಕೆ ಆಗಮಿಸಿದ್ದರು. ಹರಕೆ ಸೇವೆ, ದೇವರ ದರ್ಶನ ಹಾಗೂ ವಿಶೇಷ ಪೂಜೆಗಳಲ್ಲಿ ಭಾಗವಹಿಸಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದರು.

ಭಕ್ತರ ಹೆಚ್ಚಿದ ಸಂಖ್ಯೆಯಿಂದ ದೇವಸ್ಥಾನ ಪರಿಸರ, ರಥಬೀದಿ ಹಾಗೂ ಪ್ರಮುಖ ರಸ್ತೆಗಳಲ್ಲಿ ಜನದಟ್ಟಣೆ ಉಂಟಾಯಿತು. ದೇವರ ದರ್ಶನಕ್ಕಾಗಿ ಭಕ್ತರು ರಥಬೀದಿವರೆಗೂ ಸರತಿ ಸಾಲಿನಲ್ಲಿ ನಿಂತಿದ್ದು, ಮಳೆಯ ಅಡಚಣೆ ಇಲ್ಲದ ಕಾರಣ ದರ್ಶನ ವ್ಯವಸ್ಥೆ ಸುಗಮವಾಗಿತ್ತು.
ದೇವಸ್ಥಾನದ ವಸತಿಗೃಹಗಳು ವಾರದ ಹಿಂದೆಯೇ ಭರ್ತಿಯಾಗಿದ್ದರೆ, ಖಾಸಗಿ ವಸತಿಗೃಹಗಳಲ್ಲೂ ಕೊಠಡಿಗಳು ಸಂಪೂರ್ಣ ಬುಕ್ ಆಗಿದ್ದವು. ವಾಹನಗಳ ಸಂಖ್ಯೆಯೂ ಹೆಚ್ಚಾದ ಕಾರಣ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಬಳಿಯಿಂದ ಮುಖ್ಯ ಪೇಟೆಯವರೆಗೆ ಹಾಗೂ ಕಾಶಿಕಟ್ಟೆಯಿಂದ ಆದಿ ಸುಬ್ರಹ್ಮಣ್ಯ ರಸ್ತೆ ಎರಡೂ ಬದಿಗಳಲ್ಲಿ ವಾಹನಗಳ ಸಾಲು ಕಂಡುಬಂತು. ಕೆಲವೆಡೆ ‘ನೋ ಪಾರ್ಕಿಂಗ್’ ಪ್ರದೇಶಗಳಲ್ಲಿಯೂ ವಾಹನ ನಿಲುಗಡೆ ಮಾಡಿರುವುದು ಗಮನಿಸಲಾಯಿತು.


