ಶಿವಮೊಗ್ಗ: ನಗರದ ಗಾಂಧಿ ಬಜಾರ್ 1ನೇ ಕ್ರಾಸ್‌ನ ಕರಿದೇವರ ಕೇರಿಯಲ್ಲಿ ನಡೆದ ರೌಡಿಶೀಟರ್ ನರಸಿಂಹ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಜೂನ್ 12ರಂದು ಸಂಜೆ ನಡೆದಿದ್ದ ಈ ಕೊಲೆ ಪ್ರಕರಣದ ತನಿಖೆ ಕೈಗೊಂಡ ಶಿವಮೊಗ್ಗ ಕೋಟೆ ಠಾಣೆ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ, ಶುಕ್ರವಾರ ತಡರಾತ್ರಿಯೇ ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳನ್ನು ಅನಿಲ್ ಅಲಿಯಾಸ್ ಅಂಬು, ಮಧು, ಕಾರ್ತಿಕ್ ಅಲಿಯಾಸ್ ಕತ್ತೆ ಕಾರ್ತಿಕ್, ಶಬರೀಶ್ ಹಾಗೂ ರವಿ ಎಂದು ಗುರುತಿಸಲಾಗಿದೆ. ಮೊಬೈಲ್ ಸಿಗ್ನಲ್ ಆಧಾರದ ಮೇಲೆ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಎರಡು ಬೈಕ್‌ಗಳಲ್ಲಿ ಬಂದು ನರಸಿಂಹನ ಮೇಲೆ ಲಾಂಗು ಹಾಗೂ ಮಚ್ಚುಗಳಿಂದ ದಾಳಿ ನಡೆಸಿ ಭೀಕರವಾಗಿ ಹತ್ಯೆಗೈದು ಪರಾರಿಯಾಗಿದ್ದರು. ಹಳೆ ವೈಷಮ್ಯವೇ ಕೊಲೆಗೆ ಕಾರಣ ಎನ್ನಲಾಗಿದ್ದು, ಇಸ್ಪೀಟ್ ಆಟದ ವಿಚಾರ ಹಾಗೂ ಗ್ಯಾಂಗ್‌ವಾರ್ ಹಿನ್ನೆಲೆಯಲ್ಲೇ ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಶಿವಮೊಗ್ಗ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.






