ಬಂಟ್ವಾಳ: ಆಡಳಿತ ಸೌಧದ ಸಾರ್ವಜನಿಕ ಬಳಕೆಯ ಲಿಫ್ಟ್‌ನಲ್ಲಿ ಇಬ್ಬರು ವ್ಯಕ್ತಿಗಳು ಸುಮಾರು 45 ನಿಮಿಷಗಳ ಕಾಲ ಸಿಲುಕಿಕೊಂಡ ಘಟನೆ ಗುರುವಾರ ನಡೆದಿದೆ. ಯಾವುದೇ ಅಪಾಯವಿಲ್ಲದೆ ಇಬ್ಬರನ್ನು ರಕ್ಷಿಸಲಾಗಿದೆ.

ಮಧ್ಯಾಹ್ನ 12.45ರಿಂದ 1.30ರ ವೇಳೆಗೆ ಕಚೇರಿ ಕೆಲಸಕ್ಕಾಗಿ ಬಂದಿದ್ದ ಇಬ್ಬರು ಸಾರ್ವಜನಿಕರು ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದರು. ಈ ಬಗ್ಗೆ ಅವರು ಸ್ನೇಹಿತರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಬಳಿಕ ತಹಶೀಲ್ದಾರ್ ಅವರಿಗೆ ವಿಷಯ ತಿಳಿಸಲಾಯಿತು.
ಸ್ಥಳಕ್ಕೆ ಆಗಮಿಸಿದ ಸಾರ್ವಜನಿಕರು ಪ್ರಯತ್ನಿಸಿ ಲಿಫ್ಟ್‌ನಿಂದ ಇಬ್ಬರನ್ನು ಹೊರತೆಗೆದಿದ್ದಾರೆ. ಲಿಫ್ಟ್‌ನಲ್ಲಿ ಸಿಲುಕಿದ ವೇಳೆ ಉಸಿರಾಟಕ್ಕೂ ತೊಂದರೆಯಾಗುವ ಪರಿಸ್ಥಿತಿ ಎದುರಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಲಿಫ್ಟ್ ಅಳವಡಿಸಿದ ಬಳಿಕವೇ ಇಂತಹ ಸಮಸ್ಯೆಗಳು ಕಾಣಿಸಿಕೊಂಡಿದ್ದು, ಈ ಹಿಂದೆಯೂ ಹಲವು ಬಾರಿ ದೋಷ ಉಂಟಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹಿರಿಯರು, ಮಕ್ಕಳು ಅಥವಾ ಅನಾರೋಗ್ಯ ಪೀಡಿತರು ಸಿಲುಕಿಕೊಂಡರೆ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆ ಲಿಫ್ಟ್ ದುರಸ್ತಿ ಹಾಗೂ ನಿರ್ವಹಣೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.







