ಬೆಳ್ತಂಗಡಿ: ಅಪರೂಪದ ಹಾಗೂ ಭಾವನಾತ್ಮಕ ಘಟನೆಯೊಂದಕ್ಕೆ ಧರ್ಮಸ್ಥಳ ಸಾಕ್ಷಿಯಾಗಿದೆ. 26 ವರ್ಷಗಳ ಹಿಂದೆ ಕಾಣೆಯಾಗಿದ್ದ ಬಾಲಕನೊಬ್ಬ ಇದೀಗ ಮತ್ತೆ ತನ್ನ ಊರಿಗೆ ಮರಳಿ ಬಂದು ತಾಯಿಯನ್ನು ಭೇಟಿಯಾಗಿ ಕುಟುಂಬದೊಂದಿಗೆ ಒಂದಾಗಿರುವ ಘಟನೆ ಧರ್ಮಸ್ಥಳ ಗ್ರಾಮದ ಅಶೋಕನಗರದಲ್ಲಿ ನಡೆದಿದೆ.

ಅಶೋಕನಗರದ ಕುಂಞ ಮತ್ತು ಅಕ್ಕು ದಂಪತಿಯ ಹಿರಿಯ ಪುತ್ರ ಸತೀಶ್, 2000ನೇ ಇಸವಿಯಲ್ಲಿ ಕೇವಲ 12 ವರ್ಷದ ಬಾಲಕನಾಗಿದ್ದಾಗ ಧರ್ಮಸ್ಥಳದ ಲಕ್ಷದೀಪೋತ್ಸವದ ಸಂದರ್ಭ ಸರ್ಕಸ್ ಕಂಪನಿಯೊಂದಿಗೆ ಕೆಲಸಕ್ಕೆಂದು ತೆರಳಿದ್ದ. ಬಳಿಕ ಆತ ಊರಿಗೆ ಮರಳದೇ ಕಾಣೆಯಾಗಿದ್ದ. ಕುಟುಂಬಸ್ಥರು ಸಾಕಷ್ಟು ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಮಗನಿಗಾಗಿ ತಾಯಿ ಅಕ್ಕು ವರ್ಷಗಳ ಕಾಲ ಕಾದು ಕುಳಿತಿದ್ದರು. ದೈವ-ದೇವರಿಗೆ ಹರಕೆ ಹೊತ್ತು, ಮಗನ ನೆನಪಿನಲ್ಲೇ ದಿನಗಳನ್ನು ಕಳೆದ ಅವರು, ಒಂದು ದಿನ ಮಗ ಮರಳಿ ಬರುತ್ತಾನೆ ಎಂಬ ವಿಶ್ವಾಸವನ್ನು ಮಾತ್ರ ಕಳೆದುಕೊಂಡಿರಲಿಲ್ಲ.

ಸರ್ಕಸ್ ತಂಡದೊಂದಿಗೆ ಊರು ಬಿಟ್ಟ ಸತೀಶ್ ನಂತರ ಮಹಾರಾಷ್ಟ್ರದಲ್ಲಿ ವಿವಿಧ ಕೆಲಸಗಳನ್ನು ಮಾಡಿಕೊಂಡು ಜೀವನ ಕಟ್ಟಿಕೊಂಡ. ಮದುವೆ ಹಾಲ್‌ಗಳು, ಡೆಕೋರೇಷನ್, ಚಾಲಕ ಹಾಗೂ ಹೋಟೆಲ್ ಕ್ಷೇತ್ರಗಳಲ್ಲಿ ದುಡಿದ ಆತ, ಬಳಿಕ ಸಲೀಂ ಅಬ್ದುಲ್ ಅನ್ಸಾರಿ ಎಂಬ ಹೆಸರಿನಲ್ಲಿ ಹೊಸ ಜೀವನ ಆರಂಭಿಸಿದ. ತಾಲೀಮಾ ಎಂಬ ಯುವತಿಯನ್ನು ವಿವಾಹವಾಗಿ ಪುತ್ರಿ ಖುಷಿ (14) ಹಾಗೂ ಪುತ್ರ ಅಝಂ (9) ಅವರೊಂದಿಗೆ ಮಹಾರಾಷ್ಟ್ರದಲ್ಲಿ ನೆಲೆಸಿದ್ದ.

ಆದರೆ ವರ್ಷಗಳಾದರೂ ತನ್ನ ಹುಟ್ಟೂರಿನ ನೆನಪುಗಳು ಆತನ ಮನಸ್ಸಿನಲ್ಲಿ ಜೀವಂತವಾಗಿದ್ದವು. ಇತ್ತೀಚೆಗೆ ಸ್ನೇಹಿತರೊಂದಿಗೆ ಸುಮಾರು 1,500 ಕಿಲೋಮೀಟರ್ ದೂರ ಪ್ರಯಾಣಿಸಿ ಧರ್ಮಸ್ಥಳಕ್ಕೆ ಆಗಮಿಸಿದ ಸತೀಶ್, ದೇವರ ದರ್ಶನ ಪಡೆದ ಬಳಿಕ ದೇವಸ್ಥಾನದ ಎದುರಿನ ರಸ್ತೆಯಲ್ಲಿ ನಡೆದಾಡುತ್ತಿದ್ದಾಗ ಹಳೆಯ ನೆನಪುಗಳು ಮರುಕಳಿಸಲಾರಂಭಿಸಿದವು.
ತನ್ನ ಕುಟುಂಬವನ್ನು ಹುಡುಕುವ ಉದ್ದೇಶದಿಂದ ಸ್ಥಳೀಯ ಅಂಗಡಿಯೊಂದಕ್ಕೆ ತೆರಳಿ, ತಾನು ಇದೇ ಊರಿನವನು ಹಾಗೂ 26 ವರ್ಷಗಳ ಹಿಂದೆ ಊರು ಬಿಟ್ಟು ಹೋಗಿದ್ದೆ ಎಂದು ಹೇಳಿ ತಂದೆ-ತಾಯಿ ಹಾಗೂ ತಮ್ಮಂದಿರ ಹೆಸರುಗಳನ್ನು ತಿಳಿಸಿದ್ದ. ಈ ಮಾಹಿತಿ ಕೇಳಿ ಅಚ್ಚರಿಗೊಂಡ ಅಂಗಡಿ ಮಾಲೀಕ ಯತೀಶ್ ಅವರು ವಿಚಾರವನ್ನು ಗ್ರಾಮಸ್ಥರು ಹಾಗೂ ಕುಟುಂಬದವರಿಗೆ ತಲುಪಿಸಿದರು.

ಸ್ವಲ್ಪವೇ ಸಮಯದಲ್ಲಿ ನೂರಾರು ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದರು. ಹಳೆಯ ನೆನಪುಗಳನ್ನು ಹಂಚಿಕೊಂಡ ಸತೀಶ್‌ರನ್ನು ಕಂಡ ತಾಯಿ ಅಕ್ಕು ಭಾವುಕರಾಗಿ ಮಗನನ್ನು ಬಿಗಿಯಾಗಿ ಅಪ್ಪಿಕೊಂಡರು. 26 ವರ್ಷಗಳ ಬಳಿಕ ನಡೆದ ತಾಯಿ-ಮಗನ ಈ ಪುನರ್ಮಿಲನವು ಅಲ್ಲಿದ್ದವರ ಕಣ್ಣಲ್ಲೂ ನೀರು ತರಿಸಿತು.
ತಮ್ಮ ನಾಗೇಶ್ ಸೇರಿದಂತೆ ಕುಟುಂಬದ ಎಲ್ಲ ಸದಸ್ಯರು ಸತೀಶ್‌ರನ್ನು ಆತ್ಮೀಯವಾಗಿ ಸ್ವಾಗತಿಸಿದರು. ವರ್ಷಗಳ ಬಳಿಕ ಮನೆಗೆ ಮರಳಿದ ಮಗನನ್ನು ಕುಟುಂಬಸ್ಥರು ಸಂತೋಷದಿಂದ ಬರಮಾಡಿಕೊಂಡಿದ್ದು, ಈ ಘಟನೆ ಧರ್ಮಸ್ಥಳದಲ್ಲಿ ಎಲ್ಲರ ಮನ ಮುಟ್ಟುವಂತಾಗಿದೆ.





