Breaking
8 Jun 2026, Mon

ಶ್ರೀ ಬಾಲ ಗಣಪತಿ ದೇವಸ್ಥಾನ ಅನ್ನಪಾಡಿ, ಸಜೀಪಮೂಡದಲ್ಲಿ ಕೆಸರುಗದ್ದೆ ಕ್ರೀಡಾಕೂಟ: ಪೂರ್ವಭಾವಿ ಸಭೆ

ಸಜೀಪಮೂಡ: ಶ್ರೀ ಬಾಲ ಗಣಪತಿ ದೇವಸ್ಥಾನ ಅನ್ನಪಾಡಿ, ಸಜೀಪಮೂಡ ಶ್ರೀ ಕ್ಷೇತ್ರದ ವಠಾರದಲ್ಲಿ ಜೂನ್ 28, 2026ರಂದು ನಡೆಯಲಿರುವ ಕೆಸರುಗದ್ದೆ ಕ್ರೀಡಾಕೂಟದ ಪೂರ್ವಭಾವಿ ಸಿದ್ಧತಾ ಸಭೆಯು ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಯಶವಂತ ಪೂಜಾರಿ ದೇರಾಜೆಗು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಗಣೇಶ ಚತುರ್ಥಿ ಪ್ರಯುಕ್ತ ಭಕ್ತರಿಗೆ ಬತ್ತದ ಕದಿರು (ತೆನೆ) ವಿತರಿಸಲು ಅನುಕೂಲವಾಗುವಂತೆ ದೇವಸ್ಥಾನದ ಗದ್ದೆಯಲ್ಲಿ ಪಾರಂಪರಿಕ ರೀತಿಯಲ್ಲಿ ಭತ್ತದ ಕೃಷಿ ಕಾರ್ಯ ಕೈಗೊಳ್ಳಲು ಹಾಗೂ ಸಾಮೂಹಿಕ ಬತ್ತದ ನಾಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಕೃಷಿ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಸಾರ್ವಜನಿಕರಿಗಾಗಿ ಕೆಸರುಗದ್ದೆ ಕ್ರೀಡಾಕೂಟವನ್ನು ಆಯೋಜಿಸಲು ಸಂಕಲ್ಪಿಸಲಾಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಜೀಪ ಮಾಗಣೆತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಅವರು, ಕೃಷಿ ಸಂಸ್ಕೃತಿ ಮತ್ತು ಗ್ರಾಮೀಣ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲ ಭಗವದ್ಭಕ್ತರು ಸಹಕರಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕು ಹಾಗೂ ಕೃಷಿ ಕಾರ್ಯಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ್ ಪೆರ್ವ, ಸಜೀಪಮೂಡ ಸರಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್. ಶ್ರೀಕಾಂತ ಶೆಟ್ಟಿ, ನೇತಾಜಿ ಯುವಕ ಸಂಘದ ಅಧ್ಯಕ್ಷ ನಿತಿನ್ ಅರಸ, ಪಂಚಾಯಿತಿ ಮಾಜಿ ಅಧ್ಯಕ್ಷ ವಿಶ್ವನಾಥ ಬೆಳ್ಚಡ, ಮಾಜಿ ಪಂಚಾಯಿತಿ ಸದಸ್ಯ ಭಾಸ್ಕರ, ಒಡಿಯೂರು ಗ್ರಾಮಾಭಿವೃದ್ಧಿ ಯೋಜನೆಯ ಸಂಯೋಜಕಿ ಸರಸ್ವತಿ ಶೆಟ್ಟಿ, ಮಹಿಳಾ ಸಮಿತಿ ಅಧ್ಯಕ್ಷೆ ವಿಜಯ ದೋಟ, ಕಾರ್ಯದರ್ಶಿ ಸುಜಾತ ಹಾಗೂ ರಮೇಶ್ ಅನ್ನಪಾಡಿ, ಮನ್ವಿತ್, ಸುರೇಶ್ ಬಂಗೇರ, ಪ್ರೇಮನಾಥ ದೇರಾಜೆ, ಪ್ರಮೋದ್ ಸಾನದ ಮನೆ, ಲಿಂಗಪ್ಪ ದೋಟ, ಪುರುಷೋತ್ತಮ ಕಾರಾಜೆ, ರಾಜೇಶ್ ಕೇಪಳಗುಡ್ಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದು ಸಲಹೆ-ಸೂಚನೆಗಳನ್ನು ನೀಡಿದರು.

ದೇವಾಲಯದ ಪ್ರಬಂಧಕ ಪ್ರಶಾಂತ್ ಕುಮಾರ್ ಅವರು ಸಭೆಗೆ ಆಗಮಿಸಿದವರನ್ನು ಸ್ವಾಗತಿಸಿ ವಂದಿಸಿದರು.

ಕೆಸರುಗದ್ದೆ ಕ್ರೀಡಾಕೂಟದ ಅಂಗವಾಗಿ ಬಾಲಕರು, ಬಾಲಕಿಯರು, ಪುರುಷರು ಹಾಗೂ ಮಹಿಳೆಯರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಿ, ವಿಜೇತರಿಗೆ ಪ್ರಮಾಣಪತ್ರ ಹಾಗೂ ಬಹುಮಾನಗಳನ್ನು ನೀಡಲು ತೀರ್ಮಾನಿಸಲಾಯಿತು. ಅಲ್ಲದೆ, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಂದು ಸನ್ಮಾನಿಸಲು ನಿರ್ಧರಿಸಲಾಯಿತು.

Leave a Reply

Your email address will not be published. Required fields are marked *