Breaking
8 Jun 2026, Mon

ಮೊಗ್ರು ಪ್ರೌಢಶಾಲೆಯ ನೀರಿನ ಸಮಸ್ಯೆಗೆ ಪರಿಹಾರ: ಶಾಸಕರಿಂದ ಬೋರ್‌ವೆಲ್ ಸೌಲಭ್ಯ

ಬೆಳ್ತಂಗಡಿ: ಮೊಗ್ರು ಗ್ರಾಮದ ಬುಳೇರಿ ಮೊಗ್ರು ಸರಕಾರಿ ಪ್ರೌಢಶಾಲೆಯಲ್ಲಿ ಉಂಟಾಗಿದ್ದ ನೀರಿನ ಸಮಸ್ಯೆಗೆ ತ್ವರಿತ ಸ್ಪಂದನೆ ದೊರೆತಿದ್ದು, ಶಾಲಾ ಮಕ್ಕಳ ಹಿತದೃಷ್ಟಿಯಿಂದ ಶಾಸಕ ಹರೀಶ್ ಪೂಂಜಾ ಅವರು ತಮ್ಮ ಶಾಸಕರ ವಿವೇಚನಾ ನಿಧಿಯಿಂದ ಬೋರ್‌ವೆಲ್ ಸೌಲಭ್ಯ ಒದಗಿಸಿದ್ದಾರೆ.

ಶುದ್ಧ ಕುಡಿಯುವ ನೀರಿನ ಕೊರತೆಯಿಂದ ಶಾಲೆಯಲ್ಲಿ ಎದುರಾಗಿದ್ದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಶಾಸಕರು, ವಿದ್ಯಾರ್ಥಿಗಳ ಆರೋಗ್ಯ ಹಾಗೂ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಈ ಮೂಲಕ ಶಾಲೆಯ ಮೂಲಭೂತ ಅಗತ್ಯವೊಂದಕ್ಕೆ ಶಾಶ್ವತ ಪರಿಹಾರ ದೊರೆತಂತಾಗಿದೆ.

ಶುದ್ಧ ನೀರಿನ ಸೌಲಭ್ಯವು ಮಕ್ಕಳ ಆರೋಗ್ಯ ಮತ್ತು ಶಿಕ್ಷಣಕ್ಕೆ ಅತ್ಯಗತ್ಯವಾಗಿದ್ದು, ಶಾಲೆಯ ಅಗತ್ಯಕ್ಕೆ ತಕ್ಷಣ ಸ್ಪಂದಿಸಿರುವ ಶಾಸಕರ ಜನಪರ ಕಾಳಜಿಯನ್ನು ಗ್ರಾಮಸ್ಥರು ಪ್ರಶಂಸಿಸಿದ್ದಾರೆ. “ಮಕ್ಕಳ ಭವಿಷ್ಯವೇ ನಾಳೆಯ ಬಲಿಷ್ಠ ಸಮಾಜ” ಎಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಶಾಸಕರ ಈ ಕ್ರಮವು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಸಂತಸ ಮೂಡಿಸಿದೆ.

ಈ ಸಂದರ್ಭದಲ್ಲಿ ಬಂದಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಮಾಜಿ ಸದಸ್ಯರಾದ ಬಾಲಕೃಷ್ಣ ಗೌಡ ಮುಗೇರಡ್ಕ, ಗಂಗಾಧರ ಪೂಜಾರಿ ದಂಬೆತ್ತಿಮಾರು, ಪಿಜಿನ್ ಮೊಗೇರ, ಶಾಲಾ ಮೇಲುಸ್ತುವಾರಿ ಸಮಿತಿಯ ಪದಾಧಿಕಾರಿಗಳು, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಪೋಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು.

Leave a Reply

Your email address will not be published. Required fields are marked *