ಬಂಟ್ವಾಳ: ಹಣಕಾಸು ವಹಿವಾಟು ನಡೆಸುವ ಬ್ಯಾಂಕುಗಳು ಹಾಗೂ ಇತರ ಹಣಕಾಸು ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ತಮ್ಮ ಗ್ರಾಹಕರಿಗೆ ಪ್ರಾಮಾಣಿಕ ಹಾಗೂ ನಿಷ್ಠಾವಂತ ಸೇವೆ ನೀಡಿದಾಗ ಆತ್ಮತೃಪ್ತಿ ಲಭಿಸುವುದರ ಜೊತೆಗೆ ಗ್ರಾಹಕರ ವಿಶ್ವಾಸವೂ ಹೆಚ್ಚುತ್ತದೆ ಎಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅಭಿಪ್ರಾಯಪಟ್ಟರು.

ಇತ್ತೀಚೆಗೆ ವರ್ಗಾವಣೆಗೊಂಡ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿದ್ದಕಟ್ಟೆ ಶಾಖೆಯ ಶಾಖಾಧಿಕಾರಿ ರಘುಪ್ರಸಾದ್ ಹಾಗೂ ಸಿಬ್ಬಂದಿ ಸ್ಮಿತಾ ಅವರನ್ನು ಗೌರವಿಸಿ ಬೀಳ್ಕೊಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಉತ್ತಮ ಗ್ರಾಹಕ ಸೇವೆಯೇ ಬ್ಯಾಂಕ್‌ಗಳ ಬೆಳವಣಿಗೆಯ ಮೂಲಾಧಾರವಾಗಿದ್ದು, ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಬೆಳೆಸುವುದು ಬ್ಯಾಂಕಿಂಗ್ ಕ್ಷೇತ್ರದ ಯಶಸ್ಸಿಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.

ವರ್ಗಾವಣೆಗೊಂಡ ಶಾಖಾಧಿಕಾರಿ ರಘುಪ್ರಸಾದ್ ಮಾತನಾಡಿ, ಸಿದ್ದಕಟ್ಟೆ ಭಾಗದ ಗ್ರಾಹಕರು ಅತ್ಯಂತ ಪ್ರಾಮಾಣಿಕ ಹಾಗೂ ವಿಶ್ವಾಸಾರ್ಹರಾಗಿದ್ದು, ಇಲ್ಲಿನ ಉತ್ತಮ ಸಾಮಾಜಿಕ ಮತ್ತು ಆರ್ಥಿಕ ವಾತಾವರಣವು ಹಣಕಾಸು ಸಂಸ್ಥೆಗಳ ಅಭಿವೃದ್ಧಿಗೆ ಪೂರಕವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸ್ವಾಗತ ಕಾಂಪ್ಲೆಕ್ಸ್ ಮಾಲಕರಾದ ಹರೀಶ್ ಶೆಟ್ಟಿ, ಬ್ಯಾಂಕ್ ಸಿಬ್ಬಂದಿಗಳಾದ ಮಂಜುನಾಥ್ ಹಾಗೂ ಪದ್ಮಾವತಿ, ಉದ್ಯಮಿಗಳಾದ ರಾಜೇಶ್ ಶೆಟ್ಟಿ ಕೊನೆರಬೆಟ್ಟು, ಯೋಗೀಶ್ ಶೆಟ್ಟಿಗಾರ್ ಹಾಗೂ ಪ್ರಮುಖರಾದ ಸಂತೋಷ, ಕೇಶವ ಶಭರೀಶ್, ಪ್ರಕಾಶ್ ಶೆಟ್ಟಿ, ಗಣೇಶ್ ಹೊಳ್ಳ, ಸಂಧ್ಯಾ ವಾರಿಜ, ಮೀನಾಕ್ಷಿ ಸೇರಿದಂತೆ ಅನೇಕ ಗ್ರಾಹಕರು ಉಪಸ್ಥಿತರಿದ್ದರು.


