Breaking
1 Jun 2026, Mon

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಭದಲ್ಲಿ ಶಾಲಾ ಪ್ರಾರಂಭೋತ್ಸವ ಸಂಭ್ರಮ

ಕಲ್ಲಡ್ಕ: 2026-27ನೇ ಶೈಕ್ಷಣಿಕ ವರ್ಷದ ಅಂಗವಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಭದಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲಾ ಆವರಣವನ್ನು ತಲಿರು ತೋರಣ ಹಾಗೂ ಬಲೂನುಗಳಿಂದ ಅಲಂಕರಿಸಿ ಹಬ್ಬದ ವಾತಾವರಣ ನಿರ್ಮಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವೀರಕಂಭ ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ ದಿನೇಶ್ ಅವರು, ಸರ್ಕಾರಿ ಶಾಲೆಗಳು ಇಂದು ಗುಣಮಟ್ಟದ ಶಿಕ್ಷಣದ ಮೂಲಕ ಖಾಸಗಿ ಶಾಲೆಗಳೊಂದಿಗೆ ಸ್ಪರ್ಧಿಸುತ್ತಿದ್ದು, ಸಮಾಜದ ಎಲ್ಲಾ ವರ್ಗದ ಮಕ್ಕಳಿಗೆ ಸಮಾನ ಶಿಕ್ಷಣದ ಅವಕಾಶ ಒದಗಿಸುತ್ತಿವೆ ಎಂದು ಹೇಳಿದರು. ಉಚಿತ ಶಿಕ್ಷಣ, ದಾಸೋಹ ಯೋಜನೆ, ಮೌಲ್ಯ ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಜೀವನ ಕೌಶಲ್ಯಗಳ ಬೆಳವಣಿಗೆಯಲ್ಲಿ ಸರ್ಕಾರಿ ಶಾಲೆಗಳ ಪಾತ್ರ ಮಹತ್ವದ್ದಾಗಿದೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಶಾಲೆಯ ಎಲ್ಲಾ ಮಕ್ಕಳನ್ನು ಮೆರವಣಿಗೆಯ ಮೂಲಕ ಸ್ವಾಗತಿಸಿ, ಹೂ ಸಿಂಪಡಿಸಿ ಬರಮಾಡಿಕೊಳ್ಳಲಾಯಿತು. ಬಳಿಕ ಶಾಲೆಯ “ಅಕ್ಷಯ ಬುಟ್ಟಿ”ಗೆ ಆರತಿ ಬೆಳಗಿ ಗಣ್ಯರು ಹಾಗೂ ಪೋಷಕರು ಅಕ್ಷರ ದಾಸೋಹ ಸಾಮಗ್ರಿಗಳನ್ನು ಅರ್ಪಿಸಿದರು. ಈ ಶೈಕ್ಷಣಿಕ ವರ್ಷದಲ್ಲಿ ಹೊಸದಾಗಿ ದಾಖಲಾತಿ ಪಡೆದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರನ್ನು ಪನ್ನೀರು ಸಿಂಪಡಿಸಿ, ಹೂ ಸಮರ್ಪಿಸಿ ಮತ್ತು ಆರತಿ ಬೆಳಗಿ ಆತ್ಮೀಯವಾಗಿ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಉಚಿತವಾಗಿ ನೀಡಲಾಗುವ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಬಿಸಿ ರೋಡ್ ಸಿಟಿ ವಲಯ ಸೇನಾನಿ ಗಣೇಶ್ ಶೆಟ್ಟಿ, ಜೆಸಿಐ ಬಿಸಿರೋಡ್ ಅಧ್ಯಕ್ಷ ಕಿಶೋರ್ ಆಚಾರ್ಯ, ವೀರಕಂಭ ಗ್ರಾಮ ಪಂಚಾಯಿತಿಯ ನಿಕಟಪೂರ್ವ ಉಪಾಧ್ಯಕ್ಷ ಜನಾರ್ಧನ ಪೂಜಾರಿ, ಹಿರಿಯ ವಿದ್ಯಾರ್ಥಿ ಹಾಗೂ ಪ್ರಗತಿಪರ ಕೃಷಿಕ ಜಯಪ್ರಕಾಶ್ ತೆಕ್ಕಿಪಾಪು, ಶಾಲೆಗೆ ಉಚಿತವಾಗಿ ತರಕಾರಿ ಪೂರೈಸುತ್ತಿರುವ ಚಂದ್ರಿಕಾ ವೆಜಿಟೇಬಲ್ಸ್ ಮೆಲ್ಕಾರ್‌ನ ಮಾಲಕ ಮಹಮ್ಮದ್ ಶರೀಫ್, ಯುವವಾಹಿನಿ ಮಾಣಿ ಘಟಕದ ಅಧ್ಯಕ್ಷ ಹಾಗೂ ಶ್ರೀ ಸಾಯಿ ಇಂಜಿನಿಯರಿಂಗ್ ವರ್ಕ್ಸ್‌ನ ಮಾಲಕ ಗಣೇಶ್, ಎಸ್‌ಡಿಎಂಸಿ ಅಧ್ಯಕ್ಷ ಕೊರಕೊಪ್ಪ ನಾಯ್ಕ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಪೋಷಕರು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಶಾಲಾ ಮಕ್ಕಳು ಪ್ರಾರ್ಥನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸ ಅವರು ಪ್ರಸ್ತಾವಿಕ ಭಾಷಣ ಮಾಡಿ ಸ್ವಾಗತಿಸಿದರು. ಶಿಕ್ಷಕ ತೌಸೀಫ್ ಅಹ್ಮದ್ ಶಾಲೆಯ ನೀತಿ-ನಿಯಮಗಳ ಕುರಿತು ಮಾಹಿತಿ ನೀಡಿದರು. ದೈಹಿಕ ಶಿಕ್ಷಣ ಶಿಕ್ಷಕ ಇಂದುಶೇಖರ್ ವಂದಿಸಿದರು. ಹಿರಿಯ ಶಿಕ್ಷಕಿ ಸಂಗೀತ ಶರ್ಮ ಪಿ.ಜಿ. ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಶಿಕ್ಷಕಿಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Leave a Reply

Your email address will not be published. Required fields are marked *